
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವತ್ತ ಬಿಜೆಪಿ ನೇತೃತ್ವದ ಎನ್‌ಡಿಎ ದಾಪುಗಾಲಿಟ್ಟಿದೆ. ಸಮೀಕ್ಷೆಗಳ ಲೆಕ್ಕಾಚಾರವನ್ನು ಮೀರಿ ಎನ್‌ಡಿಎ ಮೈತ್ರಿಕೂಟ 2000ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಪ್ರಚಂಡ ಬಹುಮತ ಗಳಿಸುವತ್ತ ಮುನ್ನಡೆದಿದೆ. ಈ ಬಾರಿ ಎನ್‌ಡಿಎ ಕೂಟದ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜನತಾದಳ -ಸಂಯುಕ್ತ (ಜೆಡಿಯು) ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಈ ಪೈಕಿ ಬಿಜೆಪಿ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಜೆಡಿಯು 80ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಯುವ ನಾಯಕ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿಗೆ (ಎಲ್‌ಜೆಪಿ) 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಇನ್ನೂ, ಮಹಾಘಟಬಂಧನ್ ಕೂಟದ ಪ್ರಮುಖ ಪಕ್ಷ ಆರ್‌ಜೆಡಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 26 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
| ಬಿಹಾರ ಚುನಾವಣಾ ಫಲಿತಾಂಶ 2025 (ಗೆಲುವು/ಮುನ್ನಡೆ) ಪಟ್ಟಿ ಇಂತಿದೆ.. | 2020ರ ಚುನಾವಣಾ ಫಲಿತಾಂಶ | ||||
| ಮೈತ್ರಿಕೂಟ | ಗೆಲುವು/ಮುನ್ನಡೆ | ಮೈತ್ರಿಕೂಟ | ಗೆಲುವು | ||
| ಎನ್‌ಡಿಎ | 204 | ಎನ್‌ಡಿಎ | 125 | ||
| ಎಂಜಿಬಿ | 32 | ಎಂಜಿಬಿ | 110 | ||
| ಇತರರು | 7 | ಇತರರು | 8 |
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ 125 ಸ್ಥಾನಗಳನ್ನು ಗಳಿಸಿದ್ದರೆ, ಮಹಾಘಟಬಂಧನ ಕೂಟವು 110 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಎನ್‌ಡಿಎಯಷ್ಟೇ (ಶೇ 37) ಮತಪ್ರಮಾಣವನ್ನೂ ಪಡೆದಿತ್ತು. ಮುಖ್ಯವಾಗಿ, 144 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಷ್ಟ್ರೀಯ ಜನತಾ ದಳವು (ಆರ್‌ಜೆಡಿ) 75ರಲ್ಲಿ ಗೆದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 19ರಲ್ಲಿ ಮಾತ್ರ ಗೆದ್ದಿತ್ತು. ಅದರಿಂದ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಿತ್ತು.
ಬಿಹಾರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದವು. ‘ಇಂಡಿಯಾ’ ಕೂಟವು ಬಹುಮತದಿಂದ ದೂರವೇ ಇರಲಿದೆ ಎಂದೂ ಹೇಳಿದ್ದವು. ಎನ್‌ಡಿಎ ಮೈತ್ರಿಕೂಟ ಗರಿಷ್ಠ 162 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಿದ್ದವು. ಆದರೆ, ಸಮೀಕ್ಷೆಗಳ ಅಂದಾಜನ್ನೂ ಮೀರಿ ಎನ್‌ಡಿಎ 200ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಹಾರದಲ್ಲಿ ಇತಿಹಾಸ ಬರೆದಿದೆ.
ಬಿಹಾರದಲ್ಲಿ 1995ರಿಂದ ಯಾವುದೇ ಪಕ್ಷ ಬಹುಮತ ಪಡೆದೇ ಇಲ್ಲ. ಎರಡು ದಶಕಗಳಿಂದ ಯಾವುದೇ ಪಕ್ಷ ಶೇ 25ರಷ್ಟು ಮತಗಳಿಸಿಲ್ಲ. ಮೈತ್ರಿ ರಾಜಕಾರಣದ ಹಲವು ಪಲ್ಲಟಗಳಿಗೆ ಬಿಹಾರದ ಚುನಾವಣೆ ಸಾಕ್ಷಿಯಾಗಿದ್ದು, ಅದರ ಫಲಿತಾಂಶವು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದಲ್ಲಿ ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.