ADVERTISEMENT

Bihar Elections: ಮೊದಲ ದಿನವೇ ಲಾಲು ಪ್ರಸಾದ್ ನಾಮಪತ್ರ ಸಲ್ಲಿಕೆ; ಇವರು ಅವರಲ್ಲ!

ಪಿಟಿಐ
Published 11 ಅಕ್ಟೋಬರ್ 2025, 2:32 IST
Last Updated 11 ಅಕ್ಟೋಬರ್ 2025, 2:32 IST
   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ಬೆರಳೆಣಿಕೆಯಷ್ಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಲಾಲು ಪ್ರಸಾದ್‌ ಕೂಡ ಒಬ್ಬರು. ಆದರೆ, ಅವರು ಆರ್‌ಜೆಡಿ ಮುಖ್ಯಸ್ಥರಲ್ಲ. ಬದಲಾಗಿ, ಜನಪ್ರಿಯತೆಗಾಗಿ ಹಲವು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅದೇ ಹೆಸರಿನ ವ್ಯಕ್ತಿ.

ಮರ್ಹೌರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ 45 ವರ್ಷದ ಇವರು, ಸರನ್‌ ಜಿಲ್ಲೆಯ ಜಾದೊ ರಹಿಂಪುರ ಗ್ರಾಮದವರು. ಆರ್‌ಜೆಡಿ ಮುಖ್ಯಸ್ಥ ಲಾಲು ಅವರೂ ಸರನ್‌ ಲೋಕಸಭಾ ಕ್ಷೇತ್ರದೊಂದಿಗೆ ದೀರ್ಘಕಾಲದ ನಂಟು ಹೊಂದಿದ್ದಾರೆ. ಅವರು, 1977ರಲ್ಲಿ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದು ಇಲ್ಲಿಂದಲೇ.

ಸದ್ಯ ಮರ್ಹೌರಾದಿಂದ ಕಣಕ್ಕಿಳಿದಿರುವ ಲಾಲು, ತಾವು 2001ರಲ್ಲಿ ಮೊದಲ ಸಲ ಪುರಸಭೆ ಸ್ಥಾನಕ್ಕಾಗಿ ಸ್ಪರ್ಧಿಸಿದ್ದಾಗಿ ತಿಳಿಸಿದ್ದಾರೆ. ಯಶಸ್ಸು ಸಿಗದಿದ್ದರೂ ಆಗಾಗ್ಗೆ ಚುನಾವಣೆಗಳಲ್ಲಿ ಕಣಕ್ಕಿಳಿಯುವ ಮೂಲಕ ಸುದ್ದಿಯಾಗುವ ಇವರು 'ಧಾರ್ತಿ ಪಕಡ್‌ ಆಫ್‌ ಬಿಹಾರ್‌' ಎಂದೇ ಹೆಸರುವಾಸಿ.

ADVERTISEMENT

ಆರ್‌ಜೆಡಿ ಮುಖ್ಯಸ್ಥ ಲಾಲು ಅವರ ಪತ್ನಿ ರಾಬ್ಡಿ ದೇವಿ ಅವರ ವಿರುದ್ಧ 2014ರ ಲೋಕಸಭಾ ಚುನಾವಣೆಯಲ್ಲಿ 'ಸರನ್‌'ನಿಂದ ಕಣಕ್ಕಿಳಿದಿದ್ದನ್ನು ಹೆಮ್ಮೆಯಿಂದ ಸ್ಮರಿಸಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಾಲು ಬದಲು ರಾಬ್ಡಿ ಅವರು ಸ್ಪರ್ಧಿಸಿದ್ದರು. ಆದರೆ, ಆಗ ಬಿಜೆಪಿಯ ರಾಜಿವ್‌ ಪ್ರತಾಪ್‌ ರುಬೀ ಜಯ ಸಾಧಿಸಿದ್ದರು.

2017 ಹಾಗೂ 2022ರ ರಾಷ್ಟ್ರಪತಿ ಚುನಾವಣೆಯಲ್ಲೂ ಸ್ಪರ್ಧಿಸಲು ಪ್ರಯತ್ನಿಸಿದ್ದೆ. ಆದರೆ, ಎರಡು ಬಾರಿಯೂ ನಾಮಪತ್ರ ತಿರಸ್ಕೃತಗೊಂಡವು ಎಂದೂ ಈ ಲಾಲು ಹೇಳಿಕೊಂಡಿದ್ದಾರೆ.

ಎರಡು ಹಂತದ ಮತದಾನ
243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ನವೆಂಬರ್‌ 6ರಂದು, ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ನವೆಂಬರ್‌ 11ರಂದು ಮತದಾನವಾಗಲಿದೆ. ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.