ADVERTISEMENT

ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ: ರಾಹುಲ್‌ ಹೇಳಿಕೆಗೆ ಬಿಜೆಪಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಬಿಹಾರ ವಿಧಾನಸಭೆ ಚುನಾವಣೆಯು ರಂಗೇರುತ್ತಿದೆ. ‘ಇಂಡಿಯಾ’ ಕೂಟ ಮತ್ತು ಎನ್‌ಡಿಎ ನಡುವೆ ಹೇಳಿಕೆ–ಪ್ರತಿಹೇಳಿಕೆಗಳು ಆರಂಭಗೊಂಡಿವೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಪ್ರಚಾರ ಆರಂಭಿಸಿದ್ದಾರೆ. ‘ಇಂಡಿಯಾ’ದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರೊಂದಿಗೆ ಮುಜಾಫರನಗರ ಮತ್ತು ದರ್ಭಂಗಾದಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಕುರಿತು ರಾಹುಲ್‌ ಅವರು ಮಾಡಿದ ಭಾಷಣವು ಈಗ ಚುನಾವಣಾ ಪ್ರಚಾರದ ಕಾವು ಹೆಚ್ಚಿಸಿದೆ. ಅತ್ತ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ ಮತ್ತು ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

‘ಮತಕ್ಕಾಗಿ ಮೋದಿ ಕುಣಿಯಲೂ ಸಿದ್ಧ’


‘ಪ್ರಧಾನಿ ಮೋದಿ ಅವರಿಗೆ ನಿಮ್ಮ ಮತಗಳು ಬೇಕಷ್ಟೆ. ಇದಕ್ಕಾಗಿ ಅವರ ಏನು ಬೇಕಿದ್ದರೂ ಮಾಡುತ್ತಾರೆ. ಇಂಥದ್ದೊಂದು ನಾಟಕವಾಡಿ ನಾವು ನಿಮಗೆ ಮತ ನೀಡುತ್ತೇವೆ ಎಂದು ಅವರಿಗೆ ಹೇಳಿ. ಅವರು ಅದನ್ನು ಮಾಡುತ್ತಾರೆ. ನೋಡಿ ಸ್ವಾಮಿ, ಮೋದಿ ಅವರೇ ನೀವು ವೇದಿಕೆ ಮೇಲೆ ಬಂದು ಭಾಷಣ ಮಾಡಬೇಡಿ, ಕುಣಿಯಿರಿ ಎಂದು ಹೇಳಿ ನೋಡಿ, ಅದನ್ನೂ ಅವರು ಮಾಡುತ್ತಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

‘ಛತ್‌ ಪೂಜೆಯ ಸಮಯದಲ್ಲಿ ನಾನು ಯಮುನೆಯಲ್ಲಿ ಮಿಂದೇಳುತ್ತೇನೆ ಎಂದು ಮೋದಿ ಹೇಳಿದರು. ಒಂದು ಕಡೆ ಮಾಲಿನ್ಯಯುಕ್ತ ಯಮುನೆ. ಆ ನೀರಿನಲ್ಲಿ ಮುಳುಗಿದರೆ ನಿಮಗೆ ಅಲ್ಲಿಯೇ ರೋಗ ಬರುತ್ತದೆ. ಇನ್ನೊಂದು ಕಡೆ ಮೋದಿ ಅವರಿಗಾಗಿ ಸಣ್ಣದೊಂದು ಈಜುಕೊಳ. ಇವೆಲ್ಲವೂ ಅವರ ನಾಟಕ. ಮಾಧ್ಯಮದವರು ಕ್ಯಾಮೆರಾ ಹಿಡಿದು ಬರುತ್ತಾರೆ. ನೋಡಿ, ನೋಡಿ ಮೋದಿ ಅವರು ಯಮುನೆಯಲ್ಲಿ ಸ್ನಾನ ಮಾಡುತ್ತಾರೆ ಎನ್ನುತ್ತಾರೆ. ಯಾರೋ ಈ ಕೊಳಕ್ಕೆ ಸ್ವಚ್ಛ ನೀರು ಬಿಡುತ್ತಿದ್ದ ಪೈಪ್‌ನ ಫೋಟೊ ತೆಗೆದುಬಿಟ್ಟರು. ಆಮೇಲೆ ಮೋದಿ ಅವರು ಅಯ್ಯೋ ನಾನು ಯಮುನೆಯಲ್ಲಿ ಸ್ನಾನ ಮಾಡುವುದಿಲ್ಲ ಎನ್ನುತ್ತಾರೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಮೋದಿ ಅವರು ನಿಮಗೆ ಕಡಿಮೆ ಹಣದಲ್ಲಿ ಇಂಟರ್‌ನೆಟ್‌ ನೀಡಿದೆ. ಬಡವರಿಗೂ ಸಾಮಾಜಿಕ ಮಾಧ್ಯಮ ತಲುಪಿತು ಎನ್ನುತ್ತಾರೆ. ಆದರೆ, ಅವರು ಟೆಲಿಕಾಂ ಉದ್ಯಮವನ್ನು ಅಂಬಾನಿ ಅವರಿಗೆ ಮಾತ್ರ ನೀಡಿದರು. ಇದನ್ನು ಅವರು ಹೇಳು ವುದಿಲ್ಲ. ನೀವು ರೀಲ್ಸ್‌ ನೋಡಿಕೊಂಡು ಇರಬೇಕು. ಯಾಕೆಂದರೆ ಯುವಕರಿಗೆ ಉದ್ಯೋಗ ನೀಡಲು ಅವರಿಗೆ ಸಾಧ್ಯವಿಲ್ಲ. ರೀಲ್ಸ್‌ ನೋಡದೇ ಹೋದರೆ ನೀವು ಪ್ರಧಾನಿ, ನಿತೀಶ್‌ ಮನೆ ಮುಂದೆ ಉದ್ಯೋಗಕ್ಕಾಗಿ ಪ್ರತಿಭಟಿಸುತ್ತೀರಿ’ ಎಂದರು.

‘ಮಹಾಘಟಬಂಧನ ಅಲ್ಲ, ಕಳ್ಳರ ಕೂಟ’

ದರ್ಭಂಗಾ/ಸಮಷ್ಠಿಪುರ/ ಬೆಗುಸರಾಯ್: ‘ಇಂಡಿಯಾ’ ಮೈತ್ರಿಕೂಟ ‘ಮಹಾಘಟಬಂಧನ’ ಅಲ್ಲ, ಅದು ‘ಕಳ್ಳರ ಕೂಟ’ವಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

ದರ್ಭಂಗಾನಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಲಾಲುಪ್ರಸಾದ್‌ ಅವರು ಮೇವು, ಉದ್ಯೋಗಕ್ಕಾಗಿ ಭೂಮಿ ಹಗರಣಗಳಲ್ಲಿ‌ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ₹12 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದೊಂದು ಕಳ್ಳರ ಮೈತ್ರಿಕೂಟ’ ಎಂದು ಅಮಿತ್ ಶಾ ಕರೆದಿದ್ದಾರೆ.

‘ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಲವು ಯುವಕರಿಗೆ ಟಿಕೆಟ್‌ ನೀಡಿದೆ. ರಾಜಕೀಯ ಹಿನ್ನೆಲೆ ಇಲ್ಲದ ಮೈಥಿಲಿ ಠಾಕೂರ್ ಅವರಂಥವರನ್ನು ಕಣಕ್ಕಿಳಿಸಿದೆ. ಬದಲಿಗೆ ಲಾಲು ಅವರು ಮಗನನ್ನು ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿಸಲು, ಸೋನಿಯಾಗಾಂಧಿ ಅವರು, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡಲು ಹೊರಟಿದ್ದಾರೆ. ಆ ಎರಡೂ ಸ್ಥಾನಗಳು ಖಾಲಿ ಇಲ್ಲ’ ಎಂದು ಶಾ ಹೇಳಿದ್ದಾರೆ.

‘ನೆಹರೂಗೆ ನೈಜ ಗೌರವ’

ಪಟ್ಣಾ /ದರ್ಬಾಂಗ್‌: ‘ನವೆಂಬರ್ 14ರ ಜವಾಹರಲಾಲ್‌ ನೆಹರೂ ಜನ್ಮದಿನದಂದು ಬಿಹಾರ ಚುನಾವಣೆ ಫಲಿತಾಂಶ ಪ್ರಕಟವಾಗುತ್ತದೆ. ಜನರು ಎನ್‌ಡಿಎ ಮೈತ್ರಿಕೂಟವನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತಂದರೆ, ನೆಹರೂ ಅವರಿಗೆ ಜನ್ಮದಿನದಂದು ನೀಡುವ ನೈಜ ಗೌರವವಾಗುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದರು. ಬುಧವಾರ ಬರ್ಹ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು ‘ನೀವು ಈ ಕಾರ್ಯವನ್ನು ನೆರವೇರಿಸುತ್ತೀರೋ ಇಲ್ಲವೋ?’ ಎಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದ‌ ಜನರನ್ನು ಪ್ರಶ್ನಿಸಿದರು.

‘ನೆಹರೂ ಅವರು ನಮ್ಮ ಪಕ್ಷಕ್ಕೆ ಸೇರದವರಿರಬಹುದು, ಅವರ ಸಿದ್ಧಾಂತವನ್ನು
ಒಪ್ಪದಿರಬಹುದು. ಆದರೆ, ಅವರು ನಮ್ಮ ದೇಶದ ಮೊದಲ ಪ್ರಧಾನಿಯಾಗಿದ್ದರು. ನಾನು ಅವರನ್ನು ಗೌರವಿಸುತ್ತೇನೆ’ ಎಂದು ಹೇಳಿದರು.

ಇಂಥ ಹೇಳಿಕೆಗಳು ರಾಹುಲ್‌ ಅವರ ಊಳಿಗಮಾನ್ಯ ಮನಃಸ್ಥಿತಿ ತೋರಿಸುತ್ತದೆ. ಪ್ರಧಾನಿ ಅವರನ್ನು ಛತ್‌ ಪೂಜಾವನ್ನು ರಾಹುಲ್‌ ಅವಮಾನಿಸಿದ್ದಾರೆ
–ಧರ್ಮೇಂದ್ರ ಪ್ರದಾನ್‌, ಕೇಂದ್ರ ಶಿಕ್ಷಣ ಸಚಿವ
ಛತ್ ಪೂಜಾವು ಬಿಹಾರ ಸಂಸ್ಕೃತಿಯ ಅಸ್ಮಿತೆ. ಇದಕ್ಕೆ ಮಾಡಿರುವ ಅಪಮಾನಕ್ಕಾಗಿ ಪ್ರಧಾನಿ ಅವರನ್ನೂ ಅವಮಾನಿಸಿರುವುದಕ್ಕಾಗಿ ಮಹಾಮೂತ್ರಿಕೂಟವು ಸೋಲುವಂತೆ ಬಿಹಾರದ ಜನತೆ ನೋಡಿಕೊಳ್ಳುತ್ತದೆ
–ಸುಧಾಂಶು ತ್ರಿವೇದಿ, ಬಿಜೆಪಿ ವಕ್ತಾರ
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ಸರ್ಕಾರಿ ಕೆಲಸ, ₹500ಕ್ಕೆ ಅಡುಗೆ ಅನಿಲ ಸಿಲಿಂಡರ್‌ ಮತ್ತು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌, ಗುತ್ತಿಗೆ ನೌಕರರಿಗೆ ಕಾಯಂ ಉದ್ಯೋಗ ನೀಡುತ್ತೇವೆ.
–ತೇಜಸ್ವಿ, ಆರ್‌ಜೆಡಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.