ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಿಂದ ಜನ ಸುರಾಜ್ ಪಕ್ಷದ ಸಂಸ್ಥಾಪಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಿಂದೆ ಸರಿದಿದ್ದು, 'ಯುದ್ಧಭೂಮಿಗೆ ಹೋಗುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ' ಎಂದು ಆರ್‌ಜೆಡಿ ಪಕ್ಷ ವ್ಯಂಗ್ಯ ಮಾಡಿದೆ.
ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ಬದಲಾಗಿ ಜನ ಸುರಾಜ್ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಇದರ ಬೆನ್ನಲ್ಲೇ ಆರ್‌ಜೆಡಿ ಪಕ್ಷ, 'ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲೇ ಕಿಶೋರ್ ಸೋಲನ್ನು ಒಪ್ಪಿಕೊಂಡಿದ್ದಾರೆ' ಎಂದು ಅಪಹಾಸ್ಯ ಮಾಡಿದೆ.
'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮತ್ತು ಅವರ ಪಕ್ಷ ಹೀನಾಯ ಸೋಲನ್ನು ಅನುಭವಿಸಲಿದೆ ಎಂದು ಕಿಶೋರ್ ಅರಿತುಕೊಂಡಿದ್ದಾರೆ. ಹೀಗಾಗಿಯೇ ಅವರು ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದಾರೆ. ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವಷ್ಟು ಸುಲಭವಲ್ಲ ರಾಜಕೀಯ ಎಂಬುದನ್ನು ಕಿಶೋರ್ ಅರಿತುಕೊಳ್ಳಬೇಕು' ಎಂದು ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
'ಚುನಾವಣೆಗೆ ಮೊದಲೇ ಕಿಶೋರ್ ಅವರು ಹಾಗೂ ಅವರ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಕಿಶೋರ್ ಅವರ ನಿರ್ಧಾರವು ಅವರ ಪಕ್ಷದ ಕಾರ್ಯಕರ್ತರಿಗೆ ಮಾಡಿದ ಅವಮಾನ' ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.