
ತೇಜಸ್ವಿ ಯಾದವ್ (ಸಂಗ್ರಹ ಚಿತ್ರ)
ಪಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಇಂದು (ಮಂಗಳವಾರ) ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ನನ್ನ ಕನಸು ನಿಮ್ಮಂತೆಯೇ ಇದೆ. ನಿಮ್ಮ ನೋವು ನನ್ನಂತೆಯೇ ಇದೆ. ನಮ್ಮ ಗುರಿಗಳು ಒಂದೇ ಆಗಿವೆ. ಬಿಹಾರದ ಹೊರಗಿನವರಿಗೆ ಯಾರಿಗೂ ಇದು ನಿಜವಾಗಿಯೂ ಅರ್ಥವಾಗುವುದಿಲ್ಲ ಎಂದು ತೇಜಸ್ವಿ ತಿಳಿಸಿದ್ದಾರೆ.
ಎನ್‌ಡಿಎ ಸರ್ಕಾರದಿಂದ ಜನರಿಗೆ ಸಿಕ್ಕಿರುವುದು ಸುಳ್ಳು ಭರವಸೆ, ಘೋಷಣೆಗಳು ಮಾತ್ರವೇ. ಆದರೆ ರಾಜ್ಯದ ಜನರು ಇನ್ಮುಂದೆ ಇದನ್ನು ಸಹಿಸುವುದಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಂಗಳವಾರ ತಿಳಿಸಿದ್ದಾರೆ.
'ಈಗಾಗಲೇ ತುಂಬಾ ತಡವಾಗಿದೆ. ಕಳೆದ 20 ವರ್ಷಗಳಲ್ಲಿ ರಾಜ್ಯ ನಿಜವಾಗಿಯೂ ಅಭಿವೃದ್ಧಿಯನ್ನು ಸಾಧಿಸುವಲ್ಲಿ ವಿಫಲವಾಗಿದೆ. ಎನ್‌ಡಿಎ ಸರ್ಕಾರವು ಯುವಕರಿಗೆ ಉದ್ಯೋಗ ಒದಗಿಸಲು, ಅಪರಾಧಗಳನ್ನು ಕಡಿಮೆ ಮಾಡಲು, ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ರೈತರು ಪ್ರವಾಹ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಜನರು ಹಣದುಬ್ಬರದಿಂದ ತತ್ತರಿಸಿದ್ದಾರೆ' ಎಂದು ತೇಜಸ್ವಿ ಕಿಡಿಕಾರಿದ್ದಾರೆ.
ಬಿಹಾರದ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಬಾಕಿ 122 ಸ್ಥಾನಗಳಿಗೆ ಇಂದು (ಮಂಗಳವಾರ) ಮತದಾನ ನಡೆಯುತ್ತಿದೆ. ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.