ADVERTISEMENT

Bihar Elections | ಎನ್‌ಡಿಎ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ: ಕುಶ್ವಾಹ ಅಸಮಾಧಾನ

ಪಿಟಿಐ
Published 15 ಅಕ್ಟೋಬರ್ 2025, 5:53 IST
Last Updated 15 ಅಕ್ಟೋಬರ್ 2025, 5:53 IST
<div class="paragraphs"><p>ಬಿಹಾರ ಚುನಾವಣೆ</p></div>

ಬಿಹಾರ ಚುನಾವಣೆ

   

(ಚಿತ್ರ ಕೃಪೆ: X/@ECISVEEP)

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಸೀಟು ಹಂಚಿಕೆ ಪ್ರಕಟಿಸಿದ ಬೆನ್ನಲ್ಲೇ ಸಣ್ಣ ಮಿತ್ರಪಕ್ಷಗಳಲ್ಲಿ ಅಪಸ್ವರ ಭುಗಿಲೆದ್ದಿವೆ.

ADVERTISEMENT

'ಎನ್‌ಡಿಎ ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲ' ಎಂದು ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷದ (ಆರ್‌ಎಲ್‌ಎಂ) ಅಧ್ಯಕ್ಷ, ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುವ ಮುನ್ನ ಪ್ರತಿಕ್ರಿಯಿಸಿರುವ ಅವರು, 'ಈ ಬಾರಿ ಎನ್‌ಡಿಎದಲ್ಲಿ ಎಲ್ಲವೂ ಸರಿಯಾಗಿಲ್ಲ. ಆದರೆ ಎಲ್ಲವೂ ಸರಿಯಾಗುವ ನಂಬಿಕೆಯೊಂದಿಗೆ ದೆಹಲಿಗೆ ಹೋಗುತ್ತಿದ್ದೇನೆ' ಎಂದಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಪಕ್ಷಕ್ಕೆ ಕೇವಲ ಆರು ಸ್ಥಾನಗಳನ್ನು ಮಾತ್ರ ನೀಡಲಾಗಿತ್ತು. ಇದರಿಂದ ಉಪೇಂದ್ರ ಕುಶ್ವಾಹ ತೀವ್ರ ಅಸಮಾಧಾನಗೊಂಡಿದ್ದಾರೆ. ಮಹುವಾ ಕ್ಷೇತ್ರದ ಸ್ಥಾನವನ್ನು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಮತ್ತೊಂದು ಎನ್‌ಡಿಎ ಮಿತ್ರಪಕ್ಷವಾದ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಹಂಚಿಕೆ ಮಾಡಿದ್ದರ ಬಗ್ಗೆಯೂ ಕುಶ್ವಾಹ ಅತೃಪ್ತರಾಗಿದ್ದಾರೆ.

ಪಟ್ನಾದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಕೇಂದ್ರ ಸಚಿವ ನಿತ್ಯಾನಂದ ರಾಯ್ ಮತ್ತು ರಾಜ್ಯ ನಾಯಕರು ಕುಶ್ವಾಹ ಅವರನ್ನು ಭೇಟಿಯಾಗಿ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲಗೊಂಡಿದ್ದವು. ಮಂಗಳವಾರ ತಡರಾತ್ರಿಯವರೆಗೂ ಸಭೆ ನಡೆಯಿತು. ಬಳಿಕ ಪ್ರತಿಕ್ರಿಯಿಸಿದ್ದ ಕುಶ್ವಾಹ 'ಈ ಬಾರಿ ಎನ್‌ಡಿಎದಲ್ಲಿ ಏನೂ ಸರಿಯಿಲ್ಲ' ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಉಳಿದ ಕ್ಷೇತ್ರಗಳನ್ನು ಮೈತ್ರಿಕೂಟದ ಇತರ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ. ಎಲ್‌ಜೆಪಿ (ರಾಮ್ ವಿಲಾಸ್) 29, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಆರ್‌ಎಲ್‌ಎಂ ಪಕ್ಷಗಳಿಗೆ ತಲಾ ಆರು ಸ್ಥಾನಗಳನ್ನು ನೀಡಲಾಗಿದೆ.

ಸೀಟು ಹಂಚಿಕೆ ಬಗ್ಗೆ ಎಚ್‌ಎಎಂ ಅಧ್ಯಕ್ಷ, ಕೇಂದ್ರ ಸಚಿವ ಜಿತನ್‌ ರಾಮ್‌ ಮಾಂಝಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.