ADVERTISEMENT

Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

ಅಭಯ್ ಕುಮಾರ್
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
<div class="paragraphs"><p>ಶ್ರೇಯಸಿ ಸಿಂಗ್‌ ಹಾಗೂ&nbsp;ಲತಾ ಸಿಂಗ್‌</p></div>

ಶ್ರೇಯಸಿ ಸಿಂಗ್‌ ಹಾಗೂ ಲತಾ ಸಿಂಗ್‌

   

ಪಟ್ನಾ: ರಾಜಕೀಯ ಪಕ್ಷಗಳ ಪೈಪೋಟಿಯಿಂದಾಗಿ ಈಗಾಗಲೇ ರಂಗೇರಿರುವ ಬಿಹಾರದ ಚುನಾವಣಾ ಕಣ ಈ ಬಾರಿ ಮತ್ತಷ್ಟು ರೋಚಕ ಸವಾಲುಗಳನ್ನು ಕಾಣುವ ಸಾಧ್ಯತೆಗಳಿವೆ. ಬಹುತೇಕ ರಾಜಕೀಯ ಪಕ್ಷಗಳು ಅತ್ಯುನ್ನತ ವಿದ್ಯಾಭ್ಯಾಸ ಹೊಂದಿರುವ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ವಿಶೇಷ.

ತಂದೆ ಐಎಎಸ್‌ ಅಧಿಕಾರಿ, ಸಹೋದರಿ ಐಪಿಎಸ್‌ ಅಧಿಕಾರಿ ಮಾತ್ರವಲ್ಲದೇ, ಸ್ವತಃ ತಾವೇ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ಲತಾ ಸಿಂಗ್‌ ಅವರನ್ನು ಪ್ರಶಾಂತ್‌ ಕಿಶೋರ್‌ ಅವರ ಜನ ಸುರಾಜ್‌ ಪಕ್ಷವು ಅಸ್ಥಾವಾನ್‌ ಕ್ಷೇತ್ರದಿಂದ ಕಣಕ್ಕಿಳಿಸಿದೆ. 

ADVERTISEMENT

ಈ ಹಿಂದೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪ್ರಧಾನ ಕಾರ್ಯದರ್ಶಿ ಆಗಿದ್ದ, ಬಳಿಕ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್‌ಸಿಪಿ ಸಿಂಗ್‌ ಅವರು ಲತಾ ಸಿಂಗ್ ಅವರ ತಂದೆ. ತವರು ಕ್ಷೇತ್ರದಲ್ಲೇ ಲತಾ ಕಣಕ್ಕಿಳಿದಿದ್ದಾರೆ. ಆದರೆ, 2005ರಿಂದಲೂ ಅಸ್ಥಾವಾನ್‌ ಕ್ಷೇತ್ರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಿರುವುದು ಗಮನಾರ್ಹ. 

ಇತ್ತ ಆರ್‌ಜೆಡಿ ಪಕ್ಷವು ವೈಶಾಲಿಯ ಲಾಲ್‌ಗಂಜ್‌ ಕ್ಷೇತ್ರದಲ್ಲಿ ಶಿವಾನಿ ಶುಕ್ಲಾ ಎಂಬವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ರಾಜಕಾರಣಿಯಾಗಿ ಬದಲಾದ ‘ಡಾನ್‌’ ಮುನ್ನಾ ಶುಕ್ಲಾ ಅವರ ಪುತ್ರಿಯಾಗಿರುವ ಶಿವಾನಿ, ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು, ಬ್ರಿಟನ್‌ನ ಲೀಡ್ಸ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಶಿವಾನಿ ಸ್ಪರ್ಧಿಸುತ್ತಿರುವ ಅದೇ ಲಾಲ್‌ಗಂಜ್ ಕ್ಷೇತ್ರವನ್ನು ಈ ಹಿಂದೆ ಶಿವಾನಿ ಅವರ ತಂದೆ ಮತ್ತು ತಾಯಿ ಅನ್ನೂ ಶುಕ್ಲಾ ಪ್ರತಿನಿಧಿಸಿದ್ದರು ಎಂಬುದು ವಿಶೇಷ. 

ಜಮುಯಿ ಕ್ಷೇತ್ರದಿಂದ ಶ್ರೇಯಸಿ ಸಿಂಗ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಫರೀದಾಬಾದ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಶ್ರೇಯಸಿ, ಕೇಂದ್ರದ ಮಾಜಿ ಸಚಿವ, ದಿವಂಗತ ದಿಗ್ವಿಜಯ ಸಿಂಗ್‌ ಅವರ ಪುತ್ರಿ.

2018ರ ಕಾಮನ್‌ವೆಲ್ತ್‌ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕ್ರೀಡಾ ಪ್ರತಿಭೆಯಾಗಿಯೂ ಶ್ರೇಯಸಿ ಗುರುತಿಸಿಕೊಂಡಿದ್ದರು.

ಪ್ರಮುಖ ಎಡಪಕ್ಷವಾಗಿರುವ ಸಿಪಿಐ–ಎಂಎಲ್‌ ಕೂಡ ಮೊದಲ ಪ್ರಯತ್ನದಲ್ಲೇ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ದಿವ್ಯ ಗೌತಮ್‌ ಅವರನ್ನು ಕಣಕ್ಕಿಳಿಸಿದೆ. ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಂಬಂಧಿಕರಾಗಿರುವ ದಿವ್ಯಾ ಅವರು ದೀಘಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಇನ್ನು ಜೆಡಿಯು ಕೂಡ ಗಾಯ್‌ಘಾಟ್‌ ಕ್ಷೇತ್ರದಿಂದ ಕೋಮಲ್‌ ಸಿಂಗ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕೋಮಲ್‌ ಅವರು ವೈಶಾಲಿ ಕ್ಷೇತ್ರದ ಎಲ್‌ಜೆಪಿ ಸಂಸದರಾದ ವೀಣಾ ದೇವಿ ಅವರ ಪುತ್ರಿಯಾಗಿದ್ದು, ಅವರ ತಂದೆ ದಿನೇಶ್‌ ಸಿಂಗ್‌ ಅವರು ಜೆಡಿಯು ಎಂಎಲ್‌ಸಿ ಆಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೋಮಲ್‌, ಪುಣೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.