ಸಿಎಂ ನಿತೀಶ್ ಕುಮಾರ್
ಪಟ್ನಾ: ರಾಜ್ಯದ ಪ್ರತಿ ಕುಟುಂಬದ ಮಹಿಳೆಯು ತನ್ನ ಆಯ್ಕೆಯ ಉದ್ಯಮ ನಡೆಸಲು ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಈ ಕುರಿತಾದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ, ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯ ಅಡಿಯಲ್ಲಿ, ಪ್ರತಿ ಕುಟುಂಬದ ಮಹಿಳೆಗೆ ತನ್ನ ಆಯ್ಕೆಯ ಉದ್ಯಮ ಆರಂಭಿಸಲು ಮೊದಲ ಕಂತಿನಲ್ಲಿ ₹10 ಸಾವಿರ ನೀಡಲಾಗುವುದು.
ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಮಹಿಳೆಯರ ಅರ್ಜಿಯನ್ನು ಅತೀ ಶೀಘ್ರವಾಗಿ ಸರ್ಕಾರ ಪಡೆಯಲಿದೆ. ಈ ಯೋಜನೆಯ ಸಂಪೂರ್ಣ ವ್ಯವಸ್ಥೆ ಮತ್ತು ಪ್ರಕ್ರಿಯೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸುತ್ತದೆ, ಇಲಾಖೆಯ ಸಹಕಾರಕ್ಕಾಗಿ ಅಗತ್ಯವಿರುವಂತೆ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯೂ ಭಾಗಿಯಾಗುತ್ತದೆ.
ಇದೇ ಸೆಪ್ಟೆಂಬರ್‌ನಿಂದ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ಉದ್ಯಮ ಆರಂಭಿಸಿದ ಆರು ತಿಂಗಳ ಬಳಿಕ ಮೌಲ್ಯಮಾಪನ ನಡೆಸಿ, ಅಗತ್ಯ ಬಿದ್ದರೆ ₹2 ಲಕ್ಷ ವರೆಗೆ ಹೆಚ್ಚುವರಿ ನೆರವನ್ನು ನೀಡಲಾಗುವುದು.
ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕಾಗಿ ಹಳ್ಳಿಗಳಿಂದ ನಗರಗಳವರೆಗೆ ರಾಜ್ಯದಾದ್ಯಂತ ಮಾರಾಟ ಕೇಂದ್ರವನ್ನು ಆರಂಭಿಸಲಾಗುವುದು. ಈ ಯೋಜನೆಯ ಜಾರಿಯಿಂದ ಮಹಿಳೆಯರ ಸ್ಥಾನ ಸದೃಢಗೊಳ್ಳುವುದಲ್ಲದೆ ರಾಜ್ಯದಲ್ಲಿ ಉತ್ತಮ ಉದ್ಯೋಗ ಸೃಷ್ಟಿಯಾಗಲಿದೆ. ಉದ್ಯೋಗಕ್ಕಾಗಿ ಜನರು ರಾಜ್ಯವನ್ನು ತೊರೆಯುವ ಅಗತ್ಯವಿರುವುದಿಲ್ಲ’ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.