ಪಟ್ನಾ: ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ಗ್ಯಾಂಗ್‌ಸ್ಟರ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡು ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಮಾಜಿ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಮ್ ಬಾಬು ಯಾದವ್ ಎಂದು ಗುರುತಿಸಲಾಗಿದೆ. ಈತ ಸಂಸದ ಪಪ್ಪು ಯಾದವ್ ಅವರ ಮಾಜಿ ಸಹಾಯಕನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದ ಪಪ್ಪು ಯಾದವ್ ಅವರಿಗೆ ಈಚೆಗೆ ಕರೆ ಮಾಡಿದ್ದ ರಾಮ್ ಬಾಬು ಯಾದವ್, ಲಾರೆನ್ಸ್ ಬಿಷ್ಣೋಯಿ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದ. ನಾನು ಬಿಷ್ಣೋಯಿಯ ಸಹಾಯಕ ಎಂದಿದ್ದ ರಾಮ್ ಬಾಬು, ದುಬೈನ ಸಂಖ್ಯೆಯಿಂದ ಫೋನ್ ಕರೆ ಮಾಡಿದ್ದ. ಸದ್ಯ ಈತನನ್ನು ಭೋಜ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ರಾಮ್ ಬಾಬು ಈ ಹಿಂದೆ ಜನ್ ಅಧಿಕಾರ್ ಪಾರ್ಟಿಯೊಂದಿಗೆ (ಜೆಎಪಿ) ಸಂಪರ್ಕ ಹೊಂದಿದ್ದ. ಪ್ರಾಥಮಿಕ ತನಿಖೆ ಪ್ರಕಾರ ಆತನಿಗೆ ಯಾವುದೇ ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕವಿಲ್ಲ ಎಂದು ತಿಳಿದುಬಂದಿದೆ. ಜೆಎಪಿ ಪಕ್ಷದ ಕೆಲವು ನಾಯಕರ ಸೂಚನೆ ಮೇರೆಗೆ ಪಪ್ಪು ಯಾದವ್ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೂರ್ಣಿಯಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಶರ್ಮಾ ಹೇಳಿದ್ದಾರೆ.
ಸಂಸದರ ವಾಟ್ಸ್‌ಆ್ಯಪ್ ನಂಬರ್‌ಗೆ ಬೆದರಿಕೆ ವಿಡಿಯೊ ಸಂದೇಶ ಕಳುಹಿಸಿದ್ದಕ್ಕೆ ಜೆಎಪಿಯ ನಾಯಕರು ನನಗೆ ₹2,000 ಹಣ ನೀಡಿದ್ದರು. ಜತೆಗೆ, ಇತರೆ ರಾಜಕೀಯ ನಾಯಕರಿಗೂ ಬೆದರಿಕೆ ಸಂದೇಶ ಕಳಿಸುವುದಾದರೆ ₹2 ಲಕ್ಷ ಹಣ ನೀಡುವುದಾಗಿ ತಿಳಿಸಿದ್ದರು ಎಂದು ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಶರ್ಮಾ ವಿವರಿಸಿದ್ದಾರೆ.
‘ಕಾನೂನು ಅನುಮತಿಸಿದರೆ, ಕೊಲೆಯ ಹಿಂದಿರುವ ಬಿಷ್ಣೋಯಿ ಗ್ಯಾಂಗ್‌ನ ಜಾಲವನ್ನು ಸಂಪೂರ್ಣ ನಾಶ ಮಾಡಲಾಗುವುದು’ ಎಂದು ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆಯ ನಂತರ ಪಪ್ಪು ಯಾದವ್ ‘ಎಕ್ಸ್’ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದರು.
ಬೆದರಿಕೆ ಹಿನ್ನೆಲೆಯಲ್ಲಿ ಪಾತಕಿ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಪತ್ರ ಬರೆದಿದ್ದರು.
‘ನಾನು ಕೊಲೆಯಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಆಪಾದನೆ ಬರಲಿದೆ. ಆದ್ದರಿಂದ ಇದೀಗ ನನಗಿರುವ ‘ವೈ’ ಶ್ರೇಣಿಯ ಭದ್ರತೆಯನ್ನು ‘ಝಡ್’ ಶ್ರೇಣಿಗೆ ಉನ್ನತೀಕರಿಸುವ ಜೊತೆಗೆ, ಬಿಹಾರದಲ್ಲಿ ಹಾಜರಾಗುವ ಎಲ್ಲ ಕಾರ್ಯಕ್ರಮಗಳಿಗೂ ಪೊಲೀಸ್ ಬೆಂಗಾವಲು ಪಡೆಯನ್ನು ಒದಗಿಸುವಂತೆ’ ಪತ್ರದಲ್ಲಿ ಪಪ್ಪು ಉಲ್ಲೇಖಿಸಿದ್ದರು.
ಜೆಎಪಿ ಪಕ್ಷವನ್ನು ಪಪ್ಪು ಯಾದವ್ ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು. ಬಳಿಕ ಪೂರ್ಣಿಯಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.