ADVERTISEMENT

ನಿತೀಶ್ ಕುಮಾರ್‌ಗೆ ಹೊಸ ಒಕ್ಕೂಟದ ನಾಯಕತ್ವ: ಉಪೇಂದ್ರ ಕುಶ್ವಾಹ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 10:29 IST
Last Updated 9 ಆಗಸ್ಟ್ 2022, 10:29 IST
ನಿತೀಶ್ ಕುಮಾರ್‌ - ಐಎಎನ್‌ಎಸ್ ಚಿತ್ರ
ನಿತೀಶ್ ಕುಮಾರ್‌ - ಐಎಎನ್‌ಎಸ್ ಚಿತ್ರ   

ಪಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಬಿರುಸುಗೊಂಡಿರುವ ಮಧ್ಯೆಯೇ, ಜೆಡಿ(ಯು) ನಾಯಕ ಉಪೇಂದ್ರ ಕುಶ್ವಾಹ ಮಾಡಿರುವ ಟ್ವೀಟೊಂದು ಅವರ ಪಕ್ಷವು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿರುವ ಸ್ಪಷ್ಟ ಸುಳಿವು ನೀಡಿದೆ.

ಹೊಸ ಒಕ್ಕೂಟದ ನಾಯಕತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ಅಭಿನಂದನೆಗಳು ಎಂದು ಕುಶ್ವಾಹ ಟ್ವೀಟ್ ಮಾಡಿದ್ದಾರೆ.

‘ಹೊಸ ರೂಪದಲ್ಲಿ ಹೊಸ ಒಕ್ಕೂಟದ ನಾಯಕತ್ವದ ಹೊಣೆಗಾರಿಕೆ ವಹಿಸಿಕೊಳ್ಳುತ್ತಿರುವುದಕ್ಕಾಗಿ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು. ನಿತೀಶ್ ಅವರೇ, ಹೀಗೆಯೇ ಮುಂದುವರಿಯಿರಿ. ದೇಶ ನಿಮಗಾಗಿ ಕಾಯುತ್ತಿದೆ’ ಎಂದು ಕುಶ್ವಾಹ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಮಧ್ಯೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜತೆ ನಿತೀಶ್ ಕುಮಾರ್ ಅವರು ರಾಜಭವನಕ್ಕೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ, ‘ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾದರೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ಬಹುಶಃ ಒಂದೆರಡು ದಿನಗಳಲ್ಲಿ ಈ ವಿದ್ಯಮಾನ ನಡೆಯಲಿದೆ’ ಎಂದು ಜೆಡಿ(ಯು) ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.