ನವದೆಹಲಿ: ಬಿಹಾರದಲ್ಲಿ ನಡೆಸಿದ್ದ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್) ಬಳಿಕ ಸಿದ್ಧಪಡಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ವಿರೋಧ ಪಕ್ಷಗಳು ಶನಿವಾರ ಟೀಕಿಸಿವೆ.
‘ಚುನಾವಣಾ ಆಯೋಗವು ಬಿಜೆಪಿ ಆಣತಿಯಂತೆಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಸಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಮತದಾರರ ಪಟ್ಟಿಗೆ ಸೇರಿಸಲಾದ ಮತ್ತು ಪಟ್ಟಿಯಿಂದ ತೆಗೆದು ಹಾಕಲಾದ ಮತದಾರರ ಹೆಸರುಗಳನ್ನು ಹಾಗೂ ತೆಗೆದು ಹಾಕುವುದಕ್ಕೆ ನೀಡಿರುವ ಕಾರಣಗಳನ್ನು ತಿಳಿಸಬೇಕು’ ಎಂದು ಸಿಪಿಐ(ಎಂಎಲ್)ಎಲ್ ಆಗ್ರಹಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಗಾಗಿ ಕೈಗೊಂಡಿರುವ ಸಿದ್ಧತೆಗಳ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಪರಿಶೀಲನೆ ಆರಂಭಿಸಿದ ದಿನವೇ, ಅವರಿಗೆ ತಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರವೊಂದನ್ನು ಸಿಪಿಐ(ಎಂಎಲ್) ಸಲ್ಲಿಸಿದೆ.
ಮತದಾರರ ಪಟ್ಟಿಯ ಕರಡುವಿನಿಂದ 3.66 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಈ ಕ್ರಮಕ್ಕೆ ಕಾರಣ ಸಹಿತ ಮಾಹಿತಿ ನೀಡುವಂತೆ ಸಿಪಿಐ(ಎಂಎಲ್) ಮುಖಂಡರು ಪತ್ರದಲ್ಲಿ ಕೋರಿದ್ದಾರೆ.
ಅಂದಾಜು 21.53 ಲಕ್ಷ ಹೊಸ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಆಕ್ಷೇಪಣೆ ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಕೆಲ ಹಳೆಯ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ, ಈ ರೀತಿ ಸೇರಿಸಲಾದ ಮತದಾರರ ಹೆಸರುಗಳಿಗೆ ಸಂಬಂಧಿಸಿ, ಮತಗಟ್ಟೆವಾರು ವಿವರಗಳನ್ನು ನೀಡಬೇಕು ಎಂದೂ ಕೋರಿದ್ದಾರೆ.
* ವಿದೇಶಿಯರು ಎಂಬ ಕಾರಣ ನೀಡಿ 6 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮತದಾರರ ಹೆಸರು ಹಾಗೂ ಅವರ ಪೌರತ್ವದ ಬಗ್ಗೆ ಶಂಕೆ ವ್ಯಕ್ತಪಡಿಸಲು ಕಾರಣವಾದ ಅಂಶಗಳನ್ನು ತಿಳಿಸಬೇಕು
* ಮುಸ್ಲಿಂ ದಲಿತರು ಅಥವಾ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸೇರಿದ ಹಿರಿಯ ಅಧಿಕಾರಿಗಳನ್ನು ನಿರ್ಲಕ್ಷಿಸಲಾಗಿದೆ ಹಾಗೂ ಅವರ ಬದಲಾಗಿ ಪ್ರಬಲ ಜಾತಿಗಳ ಅಧಿಕಾರಿಗಳನ್ನು ಎಸ್‌ಐಆರ್ ಕಾರ್ಯಕ್ಕೆ ಬಳಸಲಾಗಿದೆ ಎಂಬ ಆರೋಪಗಳಿವೆ. ಈ ಕುರಿತು ತನಿಖೆ ನಡೆಸಬೇಕು
* ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ಸಂಖ್ಯೆಯು ಅದೇ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿನ ಜಯದ ಅಂತರಕ್ಕಿಂತ ಹೆಚ್ಚು ಇರುವುದು ಆತಂಕಕಾರಿ. ಹೀಗಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಪಟ್ಟಿಯನ್ನು ತರಾತುರಿಯಲ್ಲಿ ಅಂತಿಮಗೊಳಿಸುವ ಬದಲು ನಿಷ್ಪಕ್ಷಪಾತವಾಗಿ ಆಯೋಗ ಕಾರ್ಯ ನಿರ್ವಹಿಸಬೇಕು
ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಎಸ್‌ಐಆರ್ ಕೈಗೊಂಡಿರುವುದು ಖಚಿತವಾಗಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲಾಗುವುದು ಎಂಬ ಚುನಾವಣಾ ಆಯೋಗದ ಹೇಳಿಕೆ ಸುಳ್ಳು ಎಂಬುದು ಸಾಬೀತಾಗಿದೆ.-ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.