ನವದೆಹಲಿ: ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆ ಮಾಡಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಬುಧವಾರ ಪ್ರತಿಭಟನೆ ಮುಂದುವರಿಸಿದ್ದು, ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಲಾಗಿದೆ.
ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಬೆಳಗ್ಗಿನ ಕಲಾಪವನ್ನು ಮುಂದೂಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮತ್ತೆ ಕಲಾಪ ಆರಂಭವಾಯಿತು. ಆದರೆ, ವಿರೋಧ ಪಕ್ಷಗಳ 30 ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
‘ನಿಮ್ಮ (ವಿರೋಧ ಪಕ್ಷಗಳ) ನಡವಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಸದನದಲ್ಲಿ ಸರಿಯಾದ ರೀತಿಯಲ್ಲಿ ಚರ್ಚಿಸಿ, ಅದು ಬಿಟ್ಟು ಕಲಾಪಕ್ಕೆ ತೊಂದರೆ ಮಾಡಬೇಡಿ’ ಎಂದು ಸ್ಪೀಕರ್ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಮನವಿ ಮಾಡಿದರು.
ದಿಲೀಪ್ ಸೈಕಿಯಾ ಅವರು ಕಲಾಪವನ್ನು ಮುಂದುವರೆಸುವಂತೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಕೂಡ ಕಾಂಗ್ರೆಸ್, ಟಿಎಂಸಿ ಸಂಸದರು ಪ್ರತಿಭಟನೆ ಮುಂದುವರೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.
ಜುಲೈ 21 ರಿಂದ ಮುಂಗಾರು ಅಧಿವೇಶನ ಆರಂಭವಾಗಿದೆ. ವಿರೋಧ ಪಕ್ಷಗಳು ಲೋಕಸಭಾ ಹಾಗೂ ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಮತ್ತು ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಚರ್ಚೆಗೆ ಒತ್ತಾಯಿಸಿ ಸತತವಾಗಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಕಲಾಪವನ್ನು ಮತ್ತೆ ಮತ್ತೆ ಮುಂದೂಡಿಕೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.