
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮುಗಿದು ಅಂತಿಮ ಪಟ್ಟಿ ಪ್ರಕಟಿಸಿದ ನಂತರ 3 ಲಕ್ಷ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ದಿನಾಂಕ ಘೋಷಿಸಿದ ನಂತರವೂ 3 ಲಕ್ಷ ಮಂದಿಯನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪೋಸ್ಟ್ ಹಾಕಿತ್ತು. ಕಾಂಗ್ರೆಸ್ ಪೋಸ್ಟ್‌ಗೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ವೇಳಾಪಟ್ಟಿ ಘೋಷಿಸುವಾಗ ಆಯೋಗ 7.42 ಕೋಟಿ ಮತದಾರರಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಇತ್ತೀಚಿನ ಪ್ರಕಟಣೆಯಲ್ಲಿ 7.45 ಕೋಟಿ ಮತದಾರರು ಎಂದು ಹೇಳಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು.
‘ಎಸ್‌ಐಆರ್ ನಂತರ ಸೆಪ್ಟೆಂಬರ್ 30ರಂದು ಪ್ರಕಟಿಸಿದ್ದ ಅಂತಿಮ ಮತದಾರರ ಪಟ್ಟಿಯ ಆಧಾರದ ಮೇಲೆ ಅಕ್ಟೋಬರ್ 6ರಂದು 7.42 ಕೋಟಿ ಮತದಾರರು ಎಂದು ನಮೂದಿಸಿದ್ದೆವು. ಚುನಾವಣಾ ನಿಯಮದ ಪ್ರಕಾರ ಚುನಾವಣೆ ಘೋಷಣೆ ನಂತರ ಪ್ರತಿ ಹಂತದ ನಾಮಪತ್ರ ಸಲ್ಲಿಕೆ ಕೊನೆಯ ದಿನಕ್ಕೆ 10 ದಿನ ಬಾಕಿ ಇರುವವರೆಗೂ ಯಾವುದೇ ಅರ್ಹ ನಾಗರಿಕ ಮತದಾರ ಪಟ್ಟಿಗೆ ಹೆಸರು ಸೇರಿಸಬಹುದು. ಹೀಗಾಗಿ, ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಕ್ಟೋಬರ್ 1ರಿಂದ ನಾಮಪತ್ರ ಸಲ್ಲಿಕೆಗೆ 10 ದಿನ ಬಾಕಿ ಇರುವವರೆಗೆ ಪಟ್ಟಿಗೆ ಹೆಸರು ಸೇರಿಸಲಾಗಿದೆ. ಅಕ್ಟೋಬರ್ 1ರ ನಂತರ ಅರ್ಜಿಗಳನ್ನು ಪರಿಗಣಿಸಿದ್ದರಿಂದ ಮತದಾರರ ಸಂಖ್ಯೆ ಅಂದಾಜು 3 ಲಕ್ಷದಷ್ಟು ಹೆಚ್ಚಾಗಿದೆ. ಮತದಾನದ ನಂತರ ಆಯೋಗ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಇದನ್ನು ಉಲ್ಲೇಖಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತಕ್ಕೆ ಅಕ್ಟೋಬರ್ 17, ಎರಡನೇ ಹಂತಕ್ಕೆ ಅಕ್ಟೋಬರ್ 20 ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.