ADVERTISEMENT

ಜಮ್ಮು–ಕಾಶ್ಮೀರದ ಯುವ ಮನಸುಗಳಲ್ಲಿ ವಿಷದ ಬೀಜ ಬಿತ್ತುತ್ತಿರುವ ಮೆಹಬೂಬಾ: ಬಿಜೆಪಿ

ಪಿಟಿಐ
Published 20 ಸೆಪ್ಟೆಂಬರ್ 2022, 11:24 IST
Last Updated 20 ಸೆಪ್ಟೆಂಬರ್ 2022, 11:24 IST
ರವೀಂದರ್ ರೈನಾ
ರವೀಂದರ್ ರೈನಾ   

ಜಮ್ಮು: ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ರಾಜಕೀಯ ಹಿತಾಸಕ್ತಿಗಾಗಿ ಯುವ ಮನಸುಗಳಲ್ಲಿ ವಿಷದ ಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ‘ರಘುಪತಿ ರಾಘವ ರಾಜಾ ರಾಂ’ ಹಾಡುವಂತೆ ಹೇಳಿದ್ದಕ್ಕೆ ಮುಫ್ತಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ವಿರುದ್ಧ ರೈನಾ ವಾಗ್ದಾಳಿ ನಡೆಸಿದ್ದಾರೆ.

‘ರಘುಪತಿ ರಾಘವ ರಾಜಾ ರಾಂ’ ಹಾಡುವಂತೆ ವಿದ್ಯಾರ್ಥಿಗಳಿಗೆ ಶಾಲಾ ಸಿಬ್ಬಂದಿ ಸೂಚಿಸುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮುಫ್ತಿ, ಇದು ಕೇಂದ್ರ ಸರ್ಕಾರದ ಹಿಂದುತ್ವ ಅಜೆಂಡಾವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದ್ದರು.

ADVERTISEMENT

‘ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಾಮಾ ಮಸೀದಿಯನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳಿಗೆ ಹಿಂದೂ ಸ್ತೋತ್ರವನ್ನು ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವವನ್ನು ಬಿಂಬಿಸಿದೆ’ ಎಂದು ಮುಫ್ತಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಇದಕ್ಕೆ ರೈನಾ ತಿರುಗೇಟು ನೀಡಿದ್ದಾರೆ.

‘ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಆ ಭಜನೆಯ (ರಘುಪತಿ ರಾಘವ ರಾಜಾ ರಾಂ) ಮೂಲಕ ಇಡೀ ದೇಶವನ್ನು ಒಗ್ಗೂಡಿಸಿದ್ದರು. ಶಾಲಾ ಮಕ್ಕಳು ಕೂಡ ಅವರ ಹೃದಯದ ಭಾವನೆಗಳನ್ನು ಪ್ರಾರ್ಥನೆ ರೂಪದಲ್ಲಿ ಬೆಳಗ್ಗಿನ ಅಸೆಂಬ್ಲಿಯನ್ನು ಹಾಡಿದ್ದರು. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ’ ಎಂದು ರೈನಾ ತಿಳಿಸಿದ್ದಾರೆ.

‘ಇಂಥ ರಾಜಕೀಯ ಮಾಡುವುದನ್ನು ಮೆಹಬೂಬಾ ನಿಲ್ಲಿಸಬೇಕು. ಅವರು ಕಾಶ್ಮೀರದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕಾಶ್ಮೀರದ ಜನತೆ ಅವರನ್ನು ತಿರಸ್ಕರಿಸಿದೆ’ ಎಂದು ರೈನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.