ADVERTISEMENT

Milkipur Results | ಮಿಲ್ಕೀಪುರ: ಬಿಜೆಪಿ ಗೆಲುವು

ಪಿಟಿಐ
Published 8 ಫೆಬ್ರುವರಿ 2025, 14:16 IST
Last Updated 8 ಫೆಬ್ರುವರಿ 2025, 14:16 IST
ಮಿಲ್ಕೀಪುರ ವಿಧಾನಸಭೆ ಉಪಚುನಾವಣೆಯಲ್ಲಿನ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಶನಿವಾರ ಸಂಭ್ರಮಿಸಿದರು –ಪಿಟಿಐ ಚಿತ್ರ
ಮಿಲ್ಕೀಪುರ ವಿಧಾನಸಭೆ ಉಪಚುನಾವಣೆಯಲ್ಲಿನ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಶನಿವಾರ ಸಂಭ್ರಮಿಸಿದರು –ಪಿಟಿಐ ಚಿತ್ರ   

–ಪಿಟಿಐ ಚಿತ್ರ

ಲಖನೌ: ಉತ್ತರ ಪ್ರದೇಶದ ಅಯೋಧ್ಯೆ ಲೋಕಸಭೆ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಬಿಜೆಪಿಯು, ಮಿಲ್ಕೀಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಗೆದ್ದು ಬೀಗಿದೆ. ಈ ಕ್ಷೇತ್ರವನ್ನು ಬಿಜೆಪಿಯು ಪ್ರತಿಷ್ಠೆಯಾಗಿ ಪರಿಗಣಿಸಿತ್ತು. ಅಯೋಧ್ಯೆಯಲ್ಲಿ ಗೆಲುವು ಕಂಡಿದ್ದ ಸಮಾಜವಾದಿ ಪಕ್ಷದ ಅವಧೇಶ್‌ ಪ್ರಸಾದ್‌ ಅವರ ಮಗ ಅಜಿತ್‌ ಪ್ರಸಾದ್‌ ಅವರನ್ನು ಮಿಲ್ಕೀಪುರ ಕ್ಷೇತ್ರದಿಂದ ಪಕ್ಷ ಕಣಕ್ಕಿಳಿಸಿತ್ತು. 

ಅವಧೇಶ್‌ ಅವರ ರಾಜೀನಾಮೆಯಿಂದಾಗಿ ಈ ಕ್ಷೇತ್ರ ತೆರವಾಗಿತ್ತು. ಬಿಜೆಪಿಯ ಚಂದ್ರಬಾನು ಪಾಸ್ವಾನ್‌ ಅವರು ಮೊದಲ ಸುತ್ತಿನ ಎಣಿಕೆಯಿಂದಲೂ ಅಜಿತ್‌ ಅವರಿಗಿಂತ ಮುನ್ನಡೆ ಸಾಧಿಸಿಕೊಂಡೇ ಬಂದರು. ಅಜಿತ್‌ ಅವರ ವಿರುದ್ಧ ಚಂದ್ರಬಾನು ಅವರು 61 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ADVERTISEMENT

ಚಂದ್ರಬಾನು ಅವರಿಗೆ 1.46 ಲಕ್ಷ ಮತಗಳು ಬಿದ್ದರೆ, ಅಜಿತ್‌ ಅವರಿಗೆ 84 ಸಾವಿರ ಮತಗಳು ಬಂದಿವೆ. ಸೋಲಿನ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಪ್ರತಿಕ್ರಿಯಿಸಿದ್ದು, ‘ಮತಗಳ ಮೂಲಕ ಬಿಜೆಪಿಯು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅದು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿದೆ’ ಎಂದಿದ್ದಾರೆ.

‘ನಮ್ಮ ಪಕ್ಷದ ಮತದಾರರನ್ನು ಮತಕಟ್ಟೆಗಳಿಗೆ ಬರದಂತೆ ಪೊಲೀಸರು ಹಿಂಸೆ ನೀಡುತ್ತಿದ್ದಾರೆ’ ಎಂದು ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ‘ಇಂದು ನಾವು ದೆಹಲಿಯಲ್ಲಿಯೂ ಗೆಲುವು ಸಾಧಿಸಿದ್ದೇವೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಜನರಿಗೆ ನಂಬಿಕೆ ಇದೆ ಎನ್ನುವುದಕ್ಕೆ ಮಿಲ್ಕೀಪುರದ ಗೆಲುವೇ ಸಾಕ್ಷಿ’ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.