ADVERTISEMENT

ಲಾಕ್‌ಡೌನ್ ವೇಳೆ ಸ್ವಪ್ನಾ ಕೇರಳದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದು ಹೇಗೆ?

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ | ಪ್ರತಿಪಕ್ಷಗಳಿಂದ ಸರ್ಕಾರಕ್ಕೆ ಪ್ರಶ್ನೆ

ಏಜೆನ್ಸೀಸ್
Published 12 ಜುಲೈ 2020, 3:13 IST
Last Updated 12 ಜುಲೈ 2020, 3:13 IST
ಸ್ವಪ್ನಾ ಸುರೇಶ್ (ಟ್ವಿಟರ್‌ ಚಿತ್ರ)
ಸ್ವಪ್ನಾ ಸುರೇಶ್ (ಟ್ವಿಟರ್‌ ಚಿತ್ರ)   

ತಿರುವನಂತಪುರ: ಲಾಕ್‌ಡೌನ್‌ ನಿಯಮ ಇದ್ದರೂ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್ ಕೇರಳ ಗಡಿ ದಾಟಿದ್ದು ಹೇಗೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಶ್ನಿಸಿವೆ. ಈ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರಿನಲ್ಲಿ ಬಂಧಿಸಿತ್ತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿ ಚಿನ್ನದ ಕಳ್ಳ ಸಾಗಾಣಿಕೆ ಜಾಲದ ಜತೆಗೆ ನಂಟು ಹೊಂದಿದ್ದಾರೆಂಬ ಆರೋಪ ಕೇರಳದಲ್ಲಿ ರಾಜಕೀಯ ವಾಕ್ಸಮರ ಹೆಚ್ಚಿಸಿತ್ತು.

ಲಾಕ್‌ಡೌನ್‌ ಇದ್ದರೂ ಇಬ್ಬರೂ ಆರೋಪಿಗಳು ರಾಜ್ಯದ ಗಡಿ ದಾಟಿ ಹೊರಹೋಗಿದ್ದು ಹೇಗೆಂಬುದನ್ನು ಪಿಣರಾಯಿ ಅವರು ವಿವರಿಸಬೇಕು ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ.

‘ಬಡವರನ್ನು ವಶಕ್ಕೆ ಪಡೆಯುವ ಪೊಲೀಸರು ಕುಟುಂಬದ ಜತೆ ಪ್ರಯಾಣಿಸುವ ಸ್ವಪ್ನಾರನ್ನು ಹೇಗೆ ಬಿಡುತ್ತಾರೆ. ಜನಸಾಮಾನ್ಯರಿಗೆ ರಾಜ್ಯದಿಂದ ಹೊರಹೋಗಲು ಪಾಸ್‌ನ ಅವಶ್ಯಕತೆ ಇದೆ. ಅಲ್ಲಲ್ಲಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಾರೆ. ಸ್ವಪ್ನಾರನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳು ಕೇರಳ, ತಮಿಳುನಾಡು ಗಡಿ ದಾಟಿ ಬೆಂಗಳೂರು ತಲುಪಿದ್ದರ ಬಗ್ಗೆ ಇತರ ರಾಜಕೀಯ ನಾಯಕರೂ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಸ್ವಪ್ನಾ ಸುರೇಶ್ ಮತ್ತು ಸಂದೀಪ್‌ ನಾಯರ್ ಅವರನ್ನು ಎನ್‌ಐಎ ಬೆಂಗಳೂರಿನಲ್ಲಿ ಬಂಧಿಸಿದೆ. ಅವರು ತಿರುವನಂತಪುರದ ಟ್ರಿಪಲ್ ಲಾಕ್‌ಡೌನ್‌ನಿಂದ ಮಾತ್ರವಲ್ಲ, ಕೇರಳದಿಂದಲೇ ತಪ್ಪಿಸಿಕೊಂಡಿದ್ದಾರೆ. ಗೃಹ ಸಚಿವರೂ ಆದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರ ನೀಡಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಾದ ಕೆ.ಎಸ್. ಸಬರಿಂತಾನ್ ಮತ್ತು ಶಾಫಿ ಪರಂಬಿಲ್‌ ಸಹ ಬಿಜೆಪಿ ನಾಯಕರು ಕೇಳಿರುವ ಪ್ರಶ್ನೆಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ.

ಈ ಮಧ್ಯೆ, ಅರುವಿಕ್ಕರದಲ್ಲಿ ಸಂದೀಪರ್ ನಾಯರ್ ಮನೆ ಮೇಲೆ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜುಲೈ 5ರಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಸಾಮಾನು ಸರಂಜಾಮುಗಳ ಸಾಗಾಟ ಮಾಡಲಾಗುತ್ತಿದ್ದ ₹15 ಕೋಟಿ ಮೌಲ್ಯದ 30 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅರಬ್‌ ಸಂಯುಕ್ತ ರಾಷ್ಟ್ರಗಳ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಳೆದ ವಾರ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.