ADVERTISEMENT

ವಕ್ಫ್ ಆಸ್ತಿ | ಲೋಕಸಭೆಯಲ್ಲಿ ಕರ್ನಾಟಕದ ವಿಚಾರವಾಗಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 16:26 IST
Last Updated 2 ಏಪ್ರಿಲ್ 2025, 16:26 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ಕರ್ನಾಟಕದಲ್ಲಿ ರಾಜಕೀಯ ನಾಯಕರು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಲೋಕಸಭೆಯಲ್ಲಿ ಬುಧವಾರ ಆರೋಪ–ಪ್ರತ್ಯಾರೋಪ ನಡೆಯಿತು.

ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಬಿಜೆಪಿಯ ಅನುರಾಗ್ ಸಿಂಗ್ ಠಾಕೂರ್, ಕರ್ನಾಟಕದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ವಕ್ಫ್ ಕಾನೂನುಗಳ ಮೂಲಕ ವರ್ಷಕ್ಕೆ ₹440 ಕೋಟಿ ವರಮಾನ ಗಳಿಸುತ್ತಿದೆ ಎಂದು ಹೇಳಿದರು.

ADVERTISEMENT

‘ಅವರ ಪಕ್ಷದ ನಾಯಕರ ಹೆಸರು ವಕ್ಫ್‌ ಹಗರಣದಲ್ಲಿ ಉಲ್ಲೇಖವಾಗಿದೆ’ ಎಂದು ಠಾಕೂರ್ ಹೇಳಿದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ಸಿನ ಕೆ.ಸಿ. ವೇಣುಗೋಪಾಲ್, ‘ಠಾಕೂರ್ ಅವರು ಸದನವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ, ನಮ್ಮ ಪಕ್ಷದ ಮುಖ್ಯಸ್ಥರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅವರು ಜಾತಿವಾದ ತೋರಿಸುತ್ತಿದ್ದಾರೆ’ ಎಂದರು.

ಇದಕ್ಕೆ ತಿರುಗೇಟು ನೀಡಿದ ಅನುರಾಗ್, ‘ನಾನು ಯಾವುದೇ ಜಾತಿಯ ಹೆಸರು ಉಲ್ಲೇಖಿಸಿಲ್ಲ. ಆದರೆ ನೀವು ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ. ನಿಮಗೆ ಪಾರದರ್ಶಕತೆ ಬೇಕಿಲ್ಲ. ಏಕೆಂದರೆ ನೀವು ವಕ್ಫ್ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ’ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಕರ್ನಾಟಕದ ಬಗ್ಗೆ ಉಲ್ಲೇಖಿಸಿದರು. ಕಲಬುರ್ಗಿ ಮತ್ತು ವಿಜಯಪುರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್‌ ಆಸ್ತಿಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ಬೆಲೆಬಾಳುವ ಆಸ್ತಿಯನ್ನು ಆಯ್ದ ಕೆಲವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ ಎಂದೂ ಶಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.