ADVERTISEMENT

ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪು: ಶತ್ರುಘ್ನ ಸಿನ್ಹಾ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನದ ಹೊಗೆ

ಪಿಟಿಐ
Published 8 ಜುಲೈ 2020, 13:46 IST
Last Updated 8 ಜುಲೈ 2020, 13:46 IST
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ   

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ‘ಬಿಜೆಪಿ ಮೂರು ಗುಂಪುಗಳಾಗಿ ವಿಂಗಡಣೆಯಾಗಿದೆ’ ಎಂದು ಮಾಜಿ ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

‘ಈ ಬಗ್ಗೆ ನೀವು ಏನು ಹೇಳಲು ಬಯಸುವಿರಿ ಸರ್? ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪುಗಳಾಗಿ (ಮಹಾರಾಜ್, ನಾರಾಜ್‌ , ಶಿವರಾಜ್) ವಿಂಗಡಣೆಯಾಗಿದೆ. ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಒಟ್ಟು 22 ಶಾಸಕರು ಕಾಂಗ್ರೆಸ್ ತೊರೆದಿದ್ದರು. ಈ ಬೆಳವಣಿಗೆ ನಂತರ ರಾಜ್ಯದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು.

ADVERTISEMENT

ಬಿಜೆಪಿ ನೇತೃತ್ವದ ಹೊಸ ಸರ್ಕಾರದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಂತರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿವರಾಜ್ ಅವರು ಸಿಂಧಿಯಾ ಅವರಿಗೆ ನಿಷ್ಠರಾಗಿದ್ದ 12 ಶಾಸಕರಿಗೆ ಸ್ಥಾನ ನೀಡಿದ್ದರು. ಈ ಬಗ್ಗೆಯೂ ಶತ್ರುಘ್ನ ಸಿನ್ಹಾ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಿನ್ಹಾ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘ನಾರಾಜ್‌’ ಪದವು ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬಗೆಗೆ ಬಿಜೆಪಿಯಲ್ಲಿರುವ ಇತರ ನಾಯಕರ ಅಸಮಾಧಾನವನ್ನು ಸೂಚಿಸುವಂತಿದೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಹಾಗೂ ಜುಲೈ 2ರಂದು ಎರಡನೇ ಬಾರಿಗೆ ಸಂಪುಟ ವಿಸ್ತರಣೆಯಾಗಿದೆ. 28 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಬಳಿಕವೂ ಮುಖ್ಯಮಂತ್ರಿ ಚೌಹಾಣ್ ಅವರಿಗೆ ಇನ್ನೂ ಖಾತೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ.

ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಚೌಹಾಣ್‌ ಅವರು ಈಚೆಗಷ್ಟೇ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು. ‘ಖಾತೆ ಹಂಚಿಕೆ ಬಗ್ಗೆ ನಾನು ಕಾರ್ಯತತ್ಪರನಾಗಿದ್ದೇನೆ’ ಎಂದು ಅವರು ದೆಹಲಿಯಿಂದ ಹಿಂತಿರುಗಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದರು.

ಸಂಪುಟ ವಿಸ್ತರಣೆ ಬಳಿಕ ಶಾಸಕ ಅಜಯ್ ವಿಷ್ಣೋಯಿ ಅವರು, ‘ಜಬಲ್‌ಪುರ್ ಮತ್ತು ರೇವಾ ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.