ನಿತಿನ್ ಗಡ್ಕರಿ
(ಪಿಟಿಐ ಚಿತ್ರ)
ಪಣಜಿ: 'ಬಿಜೆಪಿ ವಿಭಿನ್ನತೆಯನ್ನು ಹೊಂದಿರುವ ಪಕ್ಷವಾಗಿದೆ. ಅದಕ್ಕಾಗಿಯೇ ಜನರ ವಿಶ್ವಾಸವನ್ನು ಪದೇ ಪದೇ ಗಳಿಸಿಕೊಂಡಿದೆ. ಆದರೆ ಹಿಂದೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನೇ ನಾವು ಮಾಡುವುದಾದರೆ ಅವರ ನಿರ್ಗಮನ ಹಾಗೂ ನಮ್ಮ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಲು ವಿಫಲವಾಗಿತ್ತು. ಈಗ ಒಂದು ತಿಂಗಳ ಬಳಿಕ ಗಡ್ಕರಿ ಈ ಕುರಿತು ಮಾತನಾಡಿದ್ದಾರೆ.
ಗೋವಾದ ಪಣಜಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗಡ್ಕರಿ, ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.
40 ನಿಮಿಷಗಳ ಸುದೀರ್ಘ ಭಾಷಣದಲ್ಲಿ ತಮ್ಮ ಮಾರ್ಗದರ್ಶಿ, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಹೇಳಿಕೆಯನ್ನು ಉಲ್ಲೇಖ ಮಾಡಿದರು.
'ಬಿಜೆಪಿ ವಿಭಿನ್ನತೆಯನ್ನು ಹೊಂದಿರುವ ಪಕ್ಷ ಎಂದು ಅಡ್ವಾಣಿ ಹೇಳುತ್ತಿದ್ದರು. ನಾವು ಇತರೆ ಪಕ್ಷಗಳಿಗಿಂತ ಹೇಗೆ ಭಿನ್ನವಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಮಾಡಿದ ತಪ್ಪುಗಳಿಂದಾಗಿ ಜನರು ನಮ್ಮನ್ನು (ಬಿಜೆಪಿ) ಆಯ್ಕೆ ಮಾಡಿದ್ದಾರೆ. ನಾವು ಕೂಡ ಅದೇ ತಪ್ಪುಗಳನ್ನು ಮಾಡಿದ್ದಲ್ಲಿ ಅವರ (ಕಾಂಗ್ರೆಸ್) ನಿರ್ಗಮನ ಹಾಗೂ ನಮ್ಮ ಆಗಮನದಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ' ಎಂದು ಹೇಳಿದರು.
'ರಾಜಕೀಯವು, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆ ತರುವ ಸಾಧನ ಎಂದು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಭ್ರಷ್ಟಾಚಾರ ಮುಕ್ತ ದೇಶವನ್ನು ರೂಪಿಸಬೇಕು. ಅದಕ್ಕಾಗಿ ಯೋಜನೆ ರೂಪಿಸಿಕೊಳ್ಳಬೇಕು. ಜಾತಿ ರಾಜಕಾರಣ ಮಾಡಬಾರದು' ಎಂದು ಕಿವಿಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.