ವಿಜೇಂದರ್ ಗುಪ್ತಾ
ಪಿಟಿಐ ಚಿತ್ರ
ನವದೆಹಲಿ: ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರನ್ನು ದೆಹಲಿ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ರೋಹಿಣಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ವಿಜೇಂದರ್ ಅವರು, ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವ ರವೀಂದರ್ ಇಂದ್ರಾಜ್ ಅವರು ವಿಜೇಂದರ್ ಹೆಸರನ್ನು ಸೂಚಿಸಿದರು. ಧ್ವನಿಮತದ ಮೂಲಕ ಹೊಸ ಸ್ಪೀಕರ್ ಆಯ್ಕೆಗೆ ಒಪ್ಪಿಗೆ ಸೂಚಿಸಲಾಯಿತು. ಹಂಗಾಮಿ ಸ್ಪೀಕರ್ ಅರವಿಂದರ್ ಸಿಂಗ್ ಲವ್ಲಿ ಅವರು ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಸಿದರು.
ನೂತನ ಸ್ಪೀಕರ್ ಅವರನ್ನು ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ,‘ ನಿಮ್ಮ ಅನುಭವ ಈ ಸದನಕ್ಕೆ ಅಗತ್ಯವಾಗಿದೆ. ಈ ಹುದ್ದೆಗೆ ಬರಲು ನೀವು ಸಾಕಷ್ಟು ಹೋರಾಟ ಮಾಡಿದ್ದೀರಿ. ಇನ್ನು ಮುಂದೆ ಇಂತಹ ಹೋರಾಟಗಳು ಇರುವುದಿಲ್ಲ. ಭವಿಷ್ಯದ ದಿನಗಳಲ್ಲಿ ಸದನವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಲಿದ್ದೀರಿ’ ಎಂದು ತಿಳಿಸಿದರು.
ಬಳಿಕ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ, ಗುಪ್ತಾ ಅವರನ್ನು ಅಭಿನಂದಿಸಿದರು. ಬಿಜೆಪಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ದಲಿತ ಹಾಗೂ ಸಿಖ್ ವಿರೋಧಿ ನೇತೃತ್ವದ ಪಕ್ಷವೊಂದು ದೆಹಲಿ ಮುನ್ನಡೆಸುತ್ತಿರುವುದು ದುರದೃಷ್ಟಕರ. ಮುಖ್ಯಮಂತ್ರಿ ಕಚೇರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಅವರ ಭಾವಚಿತ್ರಗಳನ್ನು ತೆಗೆದುಹಾಕಲಾಗಿದೆ’ ಎಂದು ಆರೋಪಿಸಿದರು.
‘ಭಾವಚಿತ್ರ ತೆಗೆಯುವ ಮೂಲಕ ಅಂಬೇಡ್ಕರ್ ಅವರ ಲಕ್ಷಾಂತರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ’ ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
‘ಬಿಜೆಪಿ ಸರ್ಕಾರವು ಬಾಬಾ ಸಾಹೇಬ್ ಭಾವಚಿತ್ರ ತೆಗೆದು, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕಿದೆ. ನಾನು ಬಿಜೆಪಿಗೆ ಮನವಿ ಮಾಡುತ್ತೇನೆ. ನೀವು ಪ‍್ರಧಾನಿ ಭಾವಚಿತ್ರವನ್ನೂ ಹಾಕಿ, ಆದರೆ ಬಾಬಾ ಸಾಹೇಬರ ಭಾವಚಿತ್ರ ತೆಗೆಯದೇ, ಈಗಿನಂತೆ ಮುಂದುವರಿಸಿ’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.