
ಪ್ರಾತಿನಿಧಿಕ ಚಿತ್ರ
ಪಟ್ನಾ: ಬಿಹಾರದ ಬಿಜೆಪಿ ಹಿರಿಯ ಸಂಸದ ಸಂಜಯ್ ಜೈಸ್ವಾಲ್ ಅವರಿಗೆ ಅಪರಿಚಿತರು ₹10 ಕೋಟಿ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ತಮ್ಮ ಮಗನನ್ನು ಕೊಲ್ಲುವುದಾಗಿ ಕೊಲೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಸ್ತುತ ಬಿಜೆಪಿ ಮುಖ್ಯ ಸಚೇತಕರಾಗಿರುವ ಜೈಸ್ವಾಲ್ ಅವರಿಗೆ ಶುಕ್ರವಾರ ಕರೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ದೂರವಾಣಿ ಕರೆಗಳು ಬಂದಿದ್ದು, ₹10 ಕೋಟಿಗೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ನೀಡದಿದ್ದರೆ ತಮ್ಮ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಜೈಸ್ವಾಲ್ ತಿಳಿಸಿದ್ದಾರೆ. ಈ ಸಂಬಂಧ ಬೆಟ್ಟಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಅಪರಿಚಿತರು ಕ್ರಿಮಿನಲ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿರಬಹುದು ಅಥವಾ ಯಾವುದೋ ರಾಜಕೀಯ ದ್ವೇಷ ಇರಬಹುದು. ಹೀಗಾಗಿ ಎಲ್ಲಾ ಆಯಾಮಗಳಿಂದಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸ್ವಾಲ್, ಬಿಹಾರ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಪಶ್ಚಿಮ ಚಂಪಾರಣ್ ಲೋಕಸಭೆಯನ್ನು ಪ್ರತಿನಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.