ADVERTISEMENT

ನಿಂದನಾತ್ಮಕ ಭಾಷಣ: ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಮನವಿ

ಪಿಟಿಐ
Published 4 ಫೆಬ್ರುವರಿ 2025, 14:49 IST
Last Updated 4 ಫೆಬ್ರುವರಿ 2025, 14:49 IST
ರಾಹುಲ್ ಗಾಂಧಿ –ಪಿಟಿಐ ಚಿತ್ರ
ರಾಹುಲ್ ಗಾಂಧಿ –ಪಿಟಿಐ ಚಿತ್ರ   

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಹಕ್ಕುಚ್ಯುತಿ ನಿಯಮಗಳ ಅಡಿಯಲ್ಲಿ ಕ್ರಮ ಜರುಗಿಸುವಂತೆ ಕೋರಿ ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.

ರಾಹುಲ್ ಅವರು ಲೋಕಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಸುಳ್ಳು ಹೇಳಿದ್ದಾರೆ, ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂದು ದುಬೆ ಅವರು ಆರೋಪಿಸಿದ್ದಾರೆ. ರಾಹುಲ್ ಅವರು ವದಂತಿಗಳನ್ನು ಹಬ್ಬಿಸಲು ತಮಗಿರುವ ವಿಶೇಷ ಹಕ್ಕುಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಆರೋಪಗಳಿಗೆ ಆಧಾರ ಒದಗಿಸುವ ಕೆಲಸವನ್ನು ಅವರು ಮಾಡುತ್ತಿಲ್ಲ ಎಂದು ದುಬೆ ಅವರು ಸ್ಪೀಕರ್‌ಗೆ ಸಲ್ಲಿಸಿರುವ ನೋಟಿಸ್‌ನಲ್ಲಿ ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ರಾಹುಲ್ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು.

ADVERTISEMENT

ಚೀನಾ ದೇಶವು ಭಾರತದ ಭೂಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ, ಮೊಬೈಲ್‌ ಫೋನ್‌ಗಳು ಭಾರತದಲ್ಲಿ ತಯಾರಾಗುತ್ತಿಲ್ಲ ಎಂಬುದು ಸೇರಿದಂತೆ ಹಲವು ಆರೋಪಗಳನ್ನು ರಾಹುಲ್ ಮಾಡಿದ್ದಾರೆ.

‘ವಿಷಯಗಳನ್ನು ಪ್ರಸ್ತಾಪಿಸುವಾಗ ರಾಹುಲ್ ಅವರು ಇತಿಹಾಸವನ್ನು ತಿರುಚಿದ್ದಾರೆ, ನಮ್ಮ ದೇಶವನ್ನು ಗೇಲಿ ಮಾಡಲು ಯತ್ನಿಸಿದ್ದಾರೆ, ಗಣರಾಜ್ಯದ ಘನತೆಯನ್ನು ಕುಗ್ಗಿಸಲು ಯತ್ನಿಸಿದ್ದಾರೆ’ ಎಂದು ದುಬೆ ದೂರಿದ್ದಾರೆ. ಆರೋಪಗಳನ್ನು ದೃಢೀಕರಿಸುವಂತೆ ಬಿರ್ಲಾ ಅವರು ಸೂಚಿಸಿದ್ದರೂ ರಾಹುಲ್ ಅವರು ಈವರೆಗೆ ಆ ಕೆಲಸ ಮಾಡಿಲ್ಲ ಎಂದು ದುಬೆ ಹೇಳಿದ್ದಾರೆ.

ಸೋನಿಯಾ ವಿರುದ್ಧ ಹಕ್ಕುಚ್ಯುತಿ ನೋಟಿಸ್

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿಚಾರವಾಗಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ಅವರು ಅವಹೇಳನಕಾರಿಯಾದ ಪದಗಳನ್ನು ಬಳಕೆ ಮಾಡಿದ್ದಾರೆ ಎಂದು ದೂರಿರುವ ಬಿಜೆಪಿಯ ಕೆಲವು ಸಂಸದರು ಸೋನಿಯಾ ಅವರ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕಲ್ಪಿಸುವಂತೆ ಕೋರಿ ನೋಟಿಸ್‌ ನೀಡಿದ್ದಾರೆ.

ಸೋನಿಯಾ ಅವರು ಆಡಿರುವ ಮಾತುಗಳು ಬುಡಕಟ್ಟು ಸಮುದಾಯ ವಿರೋಧಿ ಮನಃಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತಿವೆ ಎಂದು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.

‘ವಿಷಯ ಗಂಭೀರವಾಗಿರುವ ಕಾರಣ ನೀವು ಇದನ್ನು ಗಮನಕ್ಕೆ ತೆಗೆದುಕೊಂಡು ಸೋನಿಯಾ ಅವರ ವಿರುದ್ಧ ಸೂಕ್ತವಾದ ಶಿಸ್ತುಕ್ರಮವನ್ನು ಜರುಗಿಸಬೇಕು’ ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.