
ಈ ವರ್ಷ ದೇಶದ ರಾಜಕೀಯದಲ್ಲಿ ಹಲವು ಮಹತ್ತರ ವಿದ್ಯಮಾನಗಳು ಘಟಿಸಿವೆ. ದೆಹಲಿ ಮತ್ತು ಬಿಹಾರ ವಿಧಾನಸಭೆಗಳಿಗೆ ಚುನಾವಣೆ ನಡೆದವು. ಉಪರಾಷ್ಟ್ರಪತಿ ಹುದ್ದೆಗೆ ಅನಿರೀಕ್ಷಿತವಾಗಿ ಚುನಾವಣೆ ನಡೆಸಬೇಕಾಯಿತು. ಹೊಸ ಕಾಯ್ದೆಗಳು, ಮಸೂದೆಗಳಿಗೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ನಡುವಣ ಜಟಾಪಟಿ ಗಮನ ಸೆಳೆದವು. ಹೊಸ ವರ್ಷದ ಅರುಣೋದಯಕ್ಕೂ ಮುನ್ನ, 2025ರಲ್ಲಿ ದೇಶದ ರಾಜಕೀಯದಲ್ಲಿ ಸದ್ದು ಮಾಡಿದ ಬೆಳವಣಿಗೆಗಳತ್ತ ಒಂದು ನೋಟ
ಬಿಹಾರ: ಎನ್‌ಡಿಎ ಜಯಭೇರಿ
ನವೆಂಬರ್‌ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೇರಿತು. ಪ್ರಬಲ ಪೈಪೋಟಿ ನೀಡಬಹುದು ಎಂದು ಭಾವಿಸಿದ್ದ ವಿರೋಧ ಪಕ್ಷಗಳ ‘ಮಹಾಘಟಬಂಧನ’ ಮುಖಭಂಗ ಅನುಭವಿಸಿತು. ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಪ್ರಮುಖ ನಾಯಕರ ತುರುಸಿನ ಪ್ರಚಾರ, ಆರೋಪ–ಪ್ರತ್ಯಾರೋಪಗಳಿಂದಾಗಿ ಈ ಚುನಾವಣೆ ಇಡೀ ದೇಶದ ಗಮನ ಸೆಳೆಯಿತು.
243 ಸದಸ್ಯಬಲದ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಜಯಿಸಿತು. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಅತಿಹೆಚ್ಚು (89) ಸ್ಥಾನಗಳನ್ನು ಗೆದ್ದಿತು. ನಿತೀಶ್ ಕುಮಾರ್ ಅವರು 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.
* ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳ ಮುಖಂಡರು ಆರೋಪ– ಪ್ರತ್ಯಾರೋಪ ನಡೆಸಿದರು
* ಲಾಲೂ ಪ್ರಸಾದ್ ಅವರ ಕುಟುಂಬದ ‘ಕದನ’ ಕೂಡಾ ಬೀದಿಗೆ ಬಂತು. ‘ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ’ ಎಂದು ಲಾಲೂ ಅವರ ಕಿರಿಯ ಮಗಳು ರೋಹಿಣಿ ಘೋಷಿಸಿದರು
* ಇದೀಗ 18 ರಾಜ್ಯಗಳು (ರಾಷ್ಟ್ರಪತಿ ಆಳ್ವಿಕೆಯಿರುವ ಮಣಿಪುರ ಹೊರತುಪಡಿಸಿ) ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಡಿಎ ಅಧಿಕಾರದಲ್ಲಿದೆ
ದೆಹಲಿಯಲ್ಲಿ ಅರಳಿದ ‘ಕಮಲ’
ದೇಶದ ರಾಜಧಾನಿ ದೆಹಲಿಯ ವಿಧಾನಸಭೆಗೆ ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತು. ಕಳೆದ ಎರಡು ಚುನಾವಣೆಗಳಲ್ಲಿ ಒಂದಂಕಿ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಮಲ ಪಾಳಯವು ಮೂರನೇ ಎರಡು ಬಹುಮತದೊಂದಿಗೆ ದೆಹಲಿಯ ಗದ್ದುಗೆ ಹಿಡಿಯಿತು.
ಆಮ್ ಆದ್ಮಿ ಪಕ್ಷದ (ಎಎಪಿ) ಬಲಿಷ್ಠ ಕೋಟೆ ಎನ್ನಲಾಗಿದ್ದ ದೆಹಲಿಯಲ್ಲಿ ಆ ಪಕ್ಷದ 10 ವರ್ಷಗಳ ಆಡಳಿತ ಕೊನೆಗೊಂಡಿತು. ಬಿಜೆಪಿಯು 27 ವರ್ಷಗಳ ನಂತರದಲ್ಲಿ ಅಧಿಕಾರಕ್ಕೆ ಮರಳಿದರೆ, ಕಾಂಗ್ರೆಸ್ ಪಕ್ಷವು ಸತತ ಮೂರನೇ ಬಾರಿಗೆ ಶೂನ್ಯ ಸಂಪಾದಿಸಿತು. 70 ಸ್ಥಾನಗಳಲ್ಲಿ 48ರಲ್ಲಿ ಬಿಜೆಪಿ ಗೆದ್ದರೆ, 22ರಲ್ಲಿ ಎಎಪಿ ಜಯಿಸಿತು. ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ಫೆಬ್ರುವರಿ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಧನಕರ್ ದಿಢೀರ್ ರಾಜೀನಾಮೆ
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಜುಲೈನಲ್ಲಿ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದರು. ‘ಆರೋಗ್ಯದ ಮೇಲೆ ಹೆಚ್ಚಿನ ಗಮನಹರಿಸಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಅವರ ಅಧಿಕಾರದ ಅವಧಿ 2027ರ ವರೆಗೂ ಇತ್ತು. ಆದರೆ, ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ರಾಜೀನಾಮೆ ಸಲ್ಲಿಸಿದ್ದು ಹಲವು ಪ್ರಶ್ನೆಗಳನ್ನು ಮೂಡಿಸಿತು. ಅವರ ಅನಿರೀಕ್ಷಿತ ರಾಜೀನಾಮೆಗೆ ಕಾರಣಗಳು ಏನಿರಬಹುದು ಎಂಬ ಬಗ್ಗೆ, ಸರ್ಕಾರ ಮತ್ತು ಉಪ ರಾಷ್ಟ್ರಪತಿಯ ಕಚೇರಿ ನಡುವಿನ ಸಂಬಂಧ ಹಾಗೂ ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಈ ಸ್ಥಾನಕ್ಕೆ ಇರುವ ಸ್ವಾಯತ್ತೆಯ ಬಗ್ಗೆ ಚರ್ಚೆಗಳು ನಡೆದವು.
ನ್ಯಾಯಮೂರ್ತಿಗಳಾದ ಯಶವಂತ ವರ್ಮಾ ಮತ್ತು ಶೇಖರ್ ಕುಮಾರ್ ಯಾದವ್ ಅವರ ಪದಚ್ಯುತಿಗೆ ಸಂಬಂಧಿಸಿದ ವಿಷಯವನ್ನು ಧನಕರ್ ಅವರು ನಿಭಾಯಿಸಿದ ರೀತಿ ಕೇಂದ್ರ ಸರ್ಕಾರಕ್ಕೆ ಸಮಾಧಾನ ತಂದಿರಲಿಲ್ಲ ಎಂಬ ಮಾತುಗಳು ಕೇಳಿಬಂದವು. ಅಲ್ಲದೆ, ಧನಕರ್ ಅವರು ಸಾರ್ವಜನಿಕವಾಗಿ ಆಡಿದ ಕೆಲವು ಮಾತುಗಳು ಕೂಡ ಸರ್ಕಾರಕ್ಕೆ ಸರಿಕಂಡಿರಲಿಲ್ಲ ಎಂಬ ವಾದ ಇದೆ. ಅವರ ರಾಜೀನಾಮೆಯನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ಟೀಕಿಸಿದವು.
ರಾಧಾಕೃಷ್ಣನ್ ಉಪರಾಷ್ಟ್ರಪತಿ
ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ನಡೆದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲುವು ಸಾಧಿಸಿದರು. ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚು ಮತಗಳನ್ನು ಪಡೆದು ದೇಶದ 15ನೇ ಉಪರಾಷ್ಟ್ರಪತಿಯಾಗಿ ಚುನಾಯಿತರಾದರು.
ಇಬ್ಬರೂ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದ್ದರೂ ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇದ್ದ ಕಾರಣ ರಾಧಾಕೃಷ್ಣನ್ ಗೆಲುವು ಖಚಿತವಾಗಿತ್ತು. ರಾಧಾಕೃಷ್ಣನ್ ಪರವಾಗಿ ಒಟ್ಟು 452 ಮತಗಳು ಚಲಾವಣೆಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದವು.
ವಿದೇಶಿ ನಾಯಕರ ಭೇಟಿ
ವಿದೇಶದ ಹಲವು ನಾಯಕರ ಭೇಟಿಗೂ ಈ ವರ್ಷ ಸಾಕ್ಷಿಯಾಯಿತು. ಭಾರತವು ಕೆಲವು ದೇಶಗಳ ಜತೆ ಕಾರ್ಯತಂತ್ರದ ಪಾಲುದಾರಿಕೆ, ರಕ್ಷಣಾ ಸಹಕಾರ ಮತ್ತು ವ್ಯಾಪಾರ ಸಂಬಂಧ ವೃದ್ಧಿಗೆ ಒಪ್ಪಂದ ಮಾಡಿಕೊಂಡಿತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್, ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಈ ವರ್ಷ ಭೇಟಿ ನೀಡಿದ ಪ್ರಮುಖ ಜಾಗತಿಕ ನಾಯಕರು.
ಅಷ್ಟೇ ಅಲ್ಲದೆ, ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್, ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಮತ್ತು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರೂ ಭಾರತಕ್ಕೆ ಭೇಟಿ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.