ನವದೆಹಲಿ: ‘ಚೆನ್ನೈ ರನ್‌ವೇನಲ್ಲಿ ಬೇರೆ ವಿಮಾನ ಇದ್ದಿದ್ದರಿಂದ ತಮ್ಮ ವಿಮಾನವನ್ನು ಕೆಳಗಿಳಿಸಲು ಅನುಮತಿ ನೀಡಲಿಲ್ಲ. ತಾವು ಸ್ವಲ್ಪದರಲ್ಲಿಯೇ ದುರಂತದಿಂದ ಪಾರಾದೆವು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪ ಮಾಡಿದ್ದಾರೆ. ಅದು ಸುಳ್ಳಾಗಿದ್ದರೆ ಅವರು ಕಠಿಣ ಕ್ರಮ ಎದುರಿಸಬೇಕು’ ಎಂದು ಬಿಜೆಪಿ ಸೋಮವಾರ ಪ್ರತಿಕ್ರಿಯಿಸಿದೆ.
ಏರ್ ಇಂಡಿಯಾ ವಿಮಾನವು ಭಾನುವಾರ ತಿರುವನಂತಪುರದಿಂದ ದೆಹಲಿಗೆ ಹೊರಟಿತ್ತು. ಬಳಿಕ, ವಿಮಾನವನ್ನು ಚೆನ್ನೈನತ್ತ ತಿರುಗಿಸಲಾಯಿತು. ಈ ಕುರಿತ ವೇಣುಗೋಪಾಲ್ ಅವರ ‘ಎಕ್ಸ್’ ಪೋಸ್ಟ್‌ಗೆ ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ‘ವಿಮಾನದಲ್ಲಿ ತಾಂತ್ರಿಕ ದೋಷ ಇರಬಹುದು ಎಂದು ಶಂಕಿಸಿದೆವು. ಈ ಕಾರಣದಿಂದಾಗಿ ಮಾರ್ಗ ಬದಲಾಯಿಸಿದೆವು’ ಎಂದಿದೆ.
ಈ ಬೆಳವಣಿಗೆಗಳ ಕುರಿತು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಇದು ಬಹಳ ಗಂಭೀರ ವಿಚಾರ. ವೇಣುಗೋಪಾಲ್ ಅವರ ಆರೋಪಗಳಿಗೆ ಏರ್ ಇಂಡಿಯಾವು ಪ್ರತಿಕ್ರಿಯಿಸಿದೆ. ಸಂಸ್ಥೆಯ ಪ್ರತಿಕ್ರಿಯೆಯು ವೇಣುಗೋಪಾಲ್ ಅವರ ಆರೋಪಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ಯಾರೋ ಒಬ್ಬರು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದಿದ್ದಾರೆ.
‘ಅವರ ಆರೋಪಗಳು ಸತ್ಯವಾದಲ್ಲಿ ಚೆನ್ನೈ ಎಟಿಸಿ ಮತ್ತು ಏರ್ ಇಂಡಿಯಾ ಸಂಸ್ಥೆ ದೇಶಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಆರೋಪಗಳು ಸುಳ್ಳಾದರೆ, ವೇಣುಗೋಪಾಲ್ ಅವರು ಕಠಿಣ ಕ್ರಮಗಳನ್ನು ಎದುರಿಸಬೇಕು. ಅವರಿಗೆ ವಿಮಾನದಲ್ಲಿ ಹಾರಾಡುವ ಅವಕಾಶ ನೀಡದಂತೆ ನಿಷೇಧಿಸಿ, ಆ ಪಟ್ಟಿಗೆ (ನೋ ಫ್ಲೈ ಲಿಸ್ಟ್) ಸೇರಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.