ADVERTISEMENT

ಪಿಎಂ ಕರೆಗೂ ಬಗ್ಗದೆ BJP ವಿರುದ್ಧ ಬಂಡಾಯ ಸಾರಿದ್ದ ಬುಡಕಟ್ಟು ನಾಯಕನಿಗೆ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 10:15 IST
Last Updated 8 ಡಿಸೆಂಬರ್ 2022, 10:15 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಶಿಮ್ಲಾ: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಮಾತನಾಡಿದ್ದರೂ ತಮ್ಮ ನಿರ್ಧಾರ ಬದಲಿಸದೆ, ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿದ್ದ ಬುಡಕಟ್ಟು ಸಮುದಾಯದ ನಾಯಕ ಕೃಪಾಲ್ ಪಾರ್ಮರ್ ಅವರುಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎಂದು .

ಮಾಜಿ ಸಂಸದರೂ ಆಗಿರುವ 63 ವರ್ಷದ ಪಾರ್ಮರ್‌ ಅವರುಫತೇಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭವಾನಿ ಸಿಂಗ್‌ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ರಾಕೇಶ್‌ ಪಟಾನಿಯ ಎರಡನೇ ಸ್ಥಾನದಲ್ಲಿದ್ದಾರೆ.

ಚುನಾವಣೆಯಿಂದ ಹಿಂದೆ ಸರಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರೇ ಪಾರ್ಮರ್‌ಗೆ ಕರೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಮೋದಿ–ಪಾರ್ಮರ್ ದೂರವಾಣಿ ಸಂಭಾಷಣೆಎನ್ನಲಾದಆಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ADVERTISEMENT

2017ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜನ್‌ ಸಿಂಗ್‌ ಪಠಾನಿಯಾ ಎದುರು ಸೋಲು ಕಂಡಿದ್ದ ಕೃಪಾಲ್‌ ಅವರಿಗೆ 2021ರ ಉಪ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಬಳಿಕ ಪಾರ್ಮರ್‌ ಬಂಡಾಯ ಸಾರಿದ್ದರು.

ಮೋದಿ ಅವರೊಂದಿಗಿನ ದೂರವಾಣಿ ಕರೆ ವೇಳೆ,ತಮಗೆ ಟಿಕೆಟ್‌ ತಪ್ಪಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರಣ. ಅವರು ಕಳೆದ 15 ವರ್ಷಗಳಿಂದಲೂ ತಮ್ಮನ್ನು ಅವಮಾನಿಸುತ್ತಿದ್ದಾರೆ ಎಂದು ಪಾರ್ಮರ್‌ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮೋದಿ ಅವರು ಪಾರ್ಮರ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು ಎಂಬ ವಿಚಾರವನ್ನು ಪ್ರಧಾನಿ ಕಚೇರಿಯಾಗಲೀ, ಬಿಜೆಪಿ ನಾಯಕರಾಗಲೀ ಖಚಿತಪಡಿಸಿಲ್ಲ. ಆದರೆ, ಅಕ್ಟೋಬರ್‌ 30ರಂದು ಪ್ರಧಾನಿ ಕರೆ ಮಾಡಿದ್ದರು ಎಂದು ಪಾರ್ಮರ್‌ ಹೇಳಿಕೊಂಡಿದ್ದಾರೆ.

'25 ವರ್ಷಗಳಿಂದಲೂ ನಾವು ಒಬ್ಬರನ್ನೊಬ್ಬರು ಬಲ್ಲೆವು. ಅವರು (ಪ್ರಧಾನಿ ಮೋದಿ) ಹಿಮಾಚಲ ಪ್ರದೇಶದ ಉಸ್ತುವಾರಿ ಮತ್ತು ನಾನು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷನಾಗಿದ್ದಾಗ ಸಾಕಷ್ಟು ಸಲ ಒಟ್ಟಿಗೆ ಪ್ರವಾಸ ಕೈಗೊಂಡಿದ್ದೇವೆ. ಒಟ್ಟಿಗೆ ಉಳಿದುಕೊಂಡಿದ್ದೇವೆ. ಅವರೊಂದಿಗೆ ಕೌಟುಂಬಿಕ ನಂಟು ಹೊಂದಿದ್ದೇನೆ. ಅವರನ್ನು ದೇವರೆಂದು ಪರಿಗಣಿಸಿದ್ದೇನೆ' ಎಂದು ಪಾರ್ಮರ್‌ ಹೇಳಿದ್ದಾರೆ.

68 ವಿಧಾನಸಭೆ ಸ್ಥಾನಗಳನ್ನೊಳಗೊಂಡ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ 30 ನಾಯಕರುಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಕಣಕ್ಕಿಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.