ADVERTISEMENT

ಉತ್ತರ ಪ್ರದೇಶ ಉಪ ಚುನಾವಣೆ: 7 ಸ್ಥಾನಗಳ ಪೈಕಿ 6 ಬಿಜೆಪಿ ಪಾಲು, ಒಂದು ಎಸ್‌ಪಿಗೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 7:24 IST
Last Updated 11 ನವೆಂಬರ್ 2020, 7:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆದ ಉಪಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ್ದು, ಒಂದು ಸ್ಥಾನ ಸಮಾಜವಾದಿ ಪಕ್ಷದ ಪಾಲಾಗಿದೆ. ಈ ಮೂಲಕ ಆಡಳಿತಾರೂಢ ಪಕ್ಷವು ರಾಜ್ಯದಲ್ಲಿ ತನ್ನ ಪ್ರಭಾವ ಉಳಿಸಿಕೊಂಡಿರುವುದನ್ನು ಸಾಬೀತು ಮಾಡಿದೆ.

ನೌಗಾಂವ್ ಸದತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಸಂಗೀತಾ ಚೌಹಾಣ್, ಬುಲಂದ್‌ಶಹರ್‌ನಲ್ಲಿ ಉಷಾ ಶಿರೋಹಿ, ತುಂಡ್ಲಾದಲ್ಲಿ ಪ್ರೇಮ್ ಪಾಲ್ ದಂಗಾರ್, ಬಂಗರ್‌ಮೌನಲ್ಲಿ ಶ್ರೀಕಾಂತ್ ಕಟಿಯಾರ್, ಡಿಯೊರಿಯಾದಲ್ಲಿ ಸತ್ಯಪ್ರಕಾಶ್ ಮಣಿ ತ್ರಿಪಾಟಿ ಮತ್ತು ಘಟಂಪುರ್ ಕ್ಷೇತ್ರದಲ್ಲಿ ಉಪೇಂದ್ರ ನಾಥ್ ಪಾಸ್ವಾನ್ ವಿಜಯ ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿ ಒಟ್ಟು 88 ಅಭ್ಯರ್ಥಿಗಳು ಕಣದಲ್ಲಿದ್ದರು.

ಸಮಾಜವಾದಿ ಪಕ್ಷದ ಲಕ್ಕಿ ಯಾದವ್ ಅವರು ಮಹಲಾನಿ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಕ್ಷೇತ್ರವನ್ನು ಅವರ ತಂದೆ ಪರಸ್ನಾಥ್ ಯಾದವ್ ಪ್ರತಿನಿಧಿಸಿದ್ದರು. ಅವರ ಸಾವಿನಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಈ ಉಪಚುನಾವಣೆ ಅಗತ್ಯವಾಗಿತ್ತು. ಅವರು ಸ್ವತಂತ್ರ ಅಭ್ಯರ್ಥಿ ಧನಂಜಯ್ ಸಿಂಗ್ ಅವರನ್ನು 4,632 ಮತಗಳಿಂದ ಸೋಲಿಸಿದ್ದಾರೆ.

ADVERTISEMENT

ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ನಿಧನದಿಂದ ನೌಗಾಂವ್ ಸದತ್ ಕ್ಷೇತ್ರ ತೆರವಾಗಿತ್ತು. ಕಾನ್‌ಪುರ್ ನಗರ ಜಿಲ್ಲೆಯ ಘಟಂಪುರ್ ಕ್ಷೇತ್ರ ಸಚಿವೆ ಕಮಲ್ ರಾನಿ ವರುಣ್ ಅವರ ನಿಧನದಿಂದ ತೆರವಾಗಿತ್ತು. ಈ ಇಬ್ಬರು ಸಚಿವರು ಕೋವಿಡ್‌ನಿಂದ ಮೃತಪಟ್ಟಿದ್ದರು.

ತುಂಡ್ಲಾ ಕ್ಷೇತ್ರದಲ್ಲಿ ಶಾಸಕ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಈ ಸೀಟು ತೆರವಾಗಿತ್ತು. ಅದೇ ವೇಳೆ ಉನ್ನಾವ್‌ನ ಬಂಗರ್‌ಮೌ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಕಾರಣ ಇಲ್ಲಿ ಉಪಚುನಾವಣೆ ನಡೆದಿದೆ.

ಬುಲಂದ್‌‌ಶಹರ್, ಡಿಯೊರಿಯಾ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ವಿರೇಂದ್ರ ಸಿಂಗ್ ಸಿರೋಹಿ, ಜನಮೇಜಯ್ ಸಿಂಗ್ ಮತ್ತು ಪ್ರಶಾಂತ್ ಯಾದವ್ ನಿಧನದಿಂದ ಸೀಟು ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.