ADVERTISEMENT

ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ: ಸಂಜಯ್‌ ರಾವುತ್‌

ಪಿಟಿಐ
Published 18 ಫೆಬ್ರುವರಿ 2024, 13:38 IST
Last Updated 18 ಫೆಬ್ರುವರಿ 2024, 13:38 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯು ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ ಎಂದು ಆರೋಪಿಸಿರುವ ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌, ರಾಜ್ಯದ ಸಂಸ್ಕೃತಿ ಹಾಳಾಗುತ್ತಿರುವುದಕ್ಕೆ ಬಿಜೆಪಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಹಾರಾಷ್ಟ್ರ ಒಂದು ಕಾಲದಲ್ಲಿ ರಾಜಕೀಯದಲ್ಲಿನ ಪ್ರಗತಿಪರ ಹಾಗೂ ಆಧುನಿಕ ಚಿಂತನೆಗಳಿಗೆ ಬೆಂಬಲ ನೀಡುವುದಕ್ಕೆ ಹೆಸರುವಾಸಿಯಾಗಿತ್ತು. ಆದರೆ, ಈಗ ರಾಜಕೀಯ ಬದಲಾವಣೆಗಳಿಗೆ ಹೆಸರುವಾಸಿಯಾಗಿದೆ. ರಾಜ್ಯದ ಚಿತ್ರಣವನ್ನು ಬದಲಾಯಿಸಿ, ಅದರ ಸಂಸ್ಕೃತಿ ಅವನತಿ ಹೊಂದುತ್ತಿರುವುದಕ್ಕೆ ಬಿಜೆಪಿಯೇ ಕಾರಣ’ ಎಂದು ರಾವುತ್‌ ಕಿಡಿಕಾರಿದ್ದಾರೆ.

ಒಂದು ಕಾಲದಲ್ಲಿ ಬಿಜೆಪಿ ನಾಯಕರಾದ ದೇವೇಂದ್ರ ಫಡಣವೀಸ್‌ ಮತ್ತು ಕಿರೀಟ್‌ ಸೋಮಯ್ಯ ಅವರು ಕಾಂಗ್ರೆಸ್‌ ನಾಯಕ ಅಶೋಕ್‌ ಚವ್ಹಾಣ್ ಅವರ ಕಟು ಟೀಕಾಕಾರರಾಗಿದ್ದರು. ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಈಗ ಚವ್ಹಾಣ್ ಅವರು ಬಿಜೆಪಿಗೆ ಸೇರ್ಪಡೆಗೊಂಡು ಫಡಣವೀಸ್‌ ಪಕ್ಷದಲ್ಲೇ ಇದ್ದಾರೆ. ಫಡಣವೀಸ್‌ ಅವರು ಒಮ್ಮೆ ಚವ್ಹಾಣ್ ಅವರನ್ನು ಡೀಲರ್‌ ಎಂದು ಕರೆದಿದ್ದರು. ಈಗ, ರಾಜ್ಯದ ಉಪಮುಖ್ಯಮಂತ್ರಿ (ಫಡಣವೀಸ್‌) ಅವರೇ ಚವ್ಹಾಣ್ ಅವರೊಂದಿಗೆ ವ್ಯವಹರಿಸಬೇಕು ಎಂದು ರಾವುತ್‌ ಹೇಳಿದ್ದಾರೆ.

ADVERTISEMENT

ಆದರ್ಶ ಸೊಸೈಟಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಪಕ್ಷದಿಂದ ಒಮ್ಮೆ ಆರೋಪಿಸಲ್ಪಟ್ಟಿದ್ದ ಚವ್ಹಾಣ್ ಅವರು ಕಳೆದ ವಾರ ಬಿಜೆಪಿಗೆ ಸೇರ್ಪಡೆಗೊಂಡರು. ಜತೆಗೆ ಪಕ್ಷದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿಲ್ಲ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ದ ತಮ್ಮ ಅಂಕಣದಲ್ಲಿ ರಾವುತ್‌ ಉಲ್ಲೇಖಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ. ಇದರೊಂದಿಗೆ ಪಕ್ಷದ ಅವನತಿಯೂ ಪ್ರಾರಂಭಗೊಂಡಿದೆ. ಛಗನ್‌ ಭುಜಬಲ್‌ ಅವರು ಮಹಾರಾಷ್ಟ್ರ ಸದನ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದರು. ಅಜಿತ್‌ ಪವಾರ್‌ ನೀರಾವರಿ ಮತ್ತು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರ್ಶ ಸೊಸೈಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಅಶೋಕ್‌ ಚವ್ಹಾಣ್ ಎದುರಿಸಿದ್ದಾರೆ ಎಂದು ರಾವುತ್‌ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.

ಫಡಣವೀಸ್‌ ಅವರು ಪ್ರತಿಪಕ್ಷದಲ್ಲಿದ್ದಾಗ ಅವರನ್ನು ಜೈಲಿಗೆ ಹಾಕುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಈಗ ಅವರೇ ಪಕ್ಷದ ಸಹೋದ್ಯೋಗಿಗಳಾಗಿದ್ದಾರೆ ಎಂದು ರಾವುತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.