ADVERTISEMENT

ಗೋಧ್ರಾ ಗಲಭೆ: ಮೋದಿಗೆ ಕ್ಲೀನ್‌ ಚಿಟ್‌, ಸತ್ಯಮೇವ ಜಯತೆ ಎಂದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 11:23 IST
Last Updated 24 ಜೂನ್ 2022, 11:23 IST
ಸುಪ್ರೀಂ ಕೋರ್ಟ್‌ | ಪಿಟಿಐ ಚಿತ್ರ
ಸುಪ್ರೀಂ ಕೋರ್ಟ್‌ | ಪಿಟಿಐ ಚಿತ್ರ   

ನವದೆಹಲಿ: ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ, ಹಿಂಸಾಕೃತ್ಯಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರೆ 63 ಜನರನ್ನು ಆರೋಪ ಮುಕ್ತರಾಗಿಸಿದ್ದನ್ನು (ಕ್ಲೀನ್‌ ಚಿಟ್) ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ 'ಸತ್ಯಮೇವ ಜಯತೆ' ಎಂದು ಬಿಜೆಪಿ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ.

ಕೇಂದ್ರ ಸಚಿವರಾದ ಅನುರಾಗ್‌ ಠಾಕೂರ್‌, ಸ್ಮೃತಿ ಇರಾನಿ, ಪಕ್ಷದ ವಕ್ತಾರ ಸಂಬೀತ್‌ ಪಾತ್ರಾ, ಬಿಜೆಪಿ ಕಾರ್ಯದರ್ಶಿ ವೈ ಸತ್ಯಕುಮಾರ್‌ ಮುಂತಾದವರು 'ಸತ್ಯಮೇವ ಜಯತೆ' ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿ ಪ್ರಧಾನಿ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಗಲಭೆ, ಹಿಂಸಾಕೃತ್ಯಗಳ ಹಿಂದೆ ದೊಡ್ಡ ಸಂಚು ನಡೆದಿತ್ತು ಎಂದು ಆರೋಪಿಸಿ, ಹತ್ಯೆಗೀಡಾಗಿದ್ದ ಕಾಂಗ್ರೆಸ್ ನಾಯಕ ಎಶಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತು. ಈ ಮೂಲಕ ತನಿಖೆ‍ಪುನರಾರಂಭಿಸುವ ಸಾಧ್ಯತೆಗಳಿಗೂ ತೆರೆ ಎಳೆದಿದೆ.

ADVERTISEMENT

ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು, ‘ಮುಸಲ್ಮಾನರ ವಿರುದ್ಧದ ಸಾಮೂಹಿಕವಾಗಿ ಹಿಂಸಾಕೃತ್ಯ ಕೈಗೊಳ್ಳಲುಉನ್ನತ ಮಟ್ಟದಲ್ಲಿ ದೊಡ್ಡ ಸಂಚು ನಡೆಸಲಾಗಿತ್ತು ಎಂಬ ಆರೋಪವನ್ನು ತನಿಖೆಯ ಹಂತದಲ್ಲಿ ಸಂಗ್ರಹಿಸಿರುವ ಸಾಕ್ಷ್ಯಗಳು ಬಲಪಡಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಏನಿದು ಘಟನೆ:
ಗುಜರಾತ್‌ನ ಗೋಧ್ರಾದಲ್ಲಿ 2022ರಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದ್ದ ಘಟನೆಯಲ್ಲಿ 59 ಜನರು ಮೃತಪಟ್ಟಿದ್ದರು. ಅದರ ಮಾರನೆಯ ದಿನ, ಫೆ. 28, 2002ರಂದು ಅಹಮದಾಬಾದ್‌ನ ಗುಲ್ಬರ್ಗ್‌ ಸೊಸೈಟಿ ಬಳಿ ನಡೆಸಿದ್ದ ವ್ಯಾಪಕ ಹಿಂಸಾಚಾರದಲ್ಲಿ ಕಾಂಗ್ರೆಸ್‌ ಮುಖಂಡ ಎಶಾನ್‌ ಜಾಫ್ರಿ ಸೇರಿದಂತೆ 68 ಜನರು ಅಸುನೀಗಿದ್ದರು.

ತದನಂತರ ರಾಜ್ಯದಲ್ಲಿ ನಡೆದಿದ್ದ ಹಿಂಸಾಕೃತ್ಯಗಳಲ್ಲಿ ಸುಮಾರು 1,044 ಜನರು ಮೃತಪಟ್ಟಿದ್ದು, ಇವರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದರು. ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮೇ 2005ರಲ್ಲಿ ಈ ಘಟನೆ ವಿವರ ನೀಡುತ್ತಾ, ‘ಹಿಂಸಾಕೃತ್ಯಗಳಲ್ಲಿ 254 ಹಿಂದೂಗಳು, 790 ಮುಸಲ್ಮಾನರು ಮೃತಪಟ್ಟಿದ್ದರು’ ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.