ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಗಾರಿಕೆ ಸಮಯದಲ್ಲಿ ಮಾಯವಾಗುತ್ತಾರೆ ಎಂದು ವ್ಯಂಗ್ಯವಾಗಿ ಬಿಂಬಿಸುವ ಚಿತ್ರವನ್ನು ಕಾಂಗ್ರೆಸ್ ತನ್ನ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವುದು ಕಾಂಗ್ರೆಸ್–ಬಿಜೆಪಿ ಮಧ್ಯೆ ಮಂಗಳವಾರ ವಾಕ್ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ತನ್ನ ‘ಎಕ್ಸ್’ ಖಾತೆಯಲ್ಲಿ, ಪ್ರಧಾನಿ ಮೋದಿ ಅವರನ್ನೇ ಹೋಲುವಂತಹ, ಮುಖವಿಲ್ಲದ, ಕುರ್ತಾ, ಪೈಜಾಮಾ ತೊಟ್ಟಿರುವ ಹಾಗೂ ಕಪ್ಪು ಬಣ್ಣದ ಶೂ ಧರಿಸಿರುವ ಚಿತ್ರದಲ್ಲಿ ಗಾಯಬ್(ಕಾಣೆಯಾಗಿದ್ದಾರೆ) ಎಂದು ಬರೆದಿರುವ ಪೋಸ್ಟ್ ಹಂಚಿಕೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಚರ್ಚೆಗೆ ಕರೆದ ಸರ್ವಪಕ್ಷಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾದ ಬೆನ್ನಲ್ಲೇ ಕಾಂಗ್ರೆಸ್ ಈ ಪೋಸ್ಟ್ ಹಂಚಿಕೊಂಡಿದೆ.
ಪಾಕ್ ಪರ ‘ಕೈ’ ಮುಖ ಅನಾವರಣ:
‘ಇದು ಮುಸ್ಲಿಂ ಸಮುದಾಯವನ್ನು ಓಲೈಸುವ ಮತ್ತು ತಲೆಬುಡವಿಲ್ಲದ ಚಿತ್ರ. ಈ ಮೂಲಕ ಭಾರತವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಸಂಸದ ಅನುರಾಗ್ ಠಾಕೂರ್ ಅವರು, ‘ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಕಾಂಗ್ರೆಸ್ ಭಾರತವನ್ನು ಪ್ರಶ್ನಿಸಿತ್ತು. ಈಗಲೂ ಪಾಕಿಸ್ತಾನದ ಪರ ನಿಂತು ಭಾರತವನ್ನು ಪ್ರಶ್ನಿಸಲು ಆರಂಭಿಸಿದೆ. ಪಾಕ್ ಪರ ಕಾಂಗ್ರೆಸ್ ಮುಖ ಮತ್ತೆ ಅನಾವರಣವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಇಂಥ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಮೇಲೆ ಇದ್ದ ಸಣ್ಣ ಸಂಶಯವೂ ಮಾಯವಾಗಿದೆ. ಇದು ರಾಜಕೀಯ ಹೇಳಿಕೆ ಮಾತ್ರವಾಗಿರದೆ, ಮುಸ್ಲಿಂ ಮತ ಸೆಳೆಯುವ ಉದ್ದೇಶದಿಂದ ಮಾಡಿರುವ ತಂತ್ರ’ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಈ ರೀತಿಯ ತಂತ್ರಗಳ ಮೊರೆ ಹೋಗುತ್ತಿರುವುದು ಇದೇ ಮೊದಲೇನಲ್ಲ. ರಾಹುಲ್ ಗಾಂಧಿ ಅವರು ಹಲವಾರು ಬಾರಿ ಪ್ರಧಾನಿ ಮೋದಿ ವಿರುದ್ಧದ ಹಿಂಸೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಪ್ರಚೋದನೆ ನೀಡಿದ್ದಾರೆ. ಆದಾಗ್ಯೂ ಈ ವಿಷಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಪ್ರಧಾನಿ ಮೋದಿ ಅವರಿಗೆ ಲಕ್ಷಾಂತರ ಭಾರತೀಯರ ಆಶೀರ್ವಾದ, ಪ್ರೀತಿ ಲಭಿಸಿದೆ’ ಎಂದು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು, ‘ಕಾಂಗ್ರೆಸ್ ಪಕ್ಷವು ಪಾಕಿಸ್ತಾನದಿಂದ ನೇರವಾಗಿ ಆದೇಶ ಪಡೆದಂತಿದೆ’ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನವು ಕಾಂಗ್ರೆಸ್ ಪಕ್ಷಕ್ಕಾಗಿ ಬ್ಯಾಟಿಂಗ್ ಮಾಡುತ್ತಿದೆ ಮತ್ತು ಕಾಂಗ್ರೆಸ್ ಪಾಕಿಸ್ತಾನಕ್ಕಾಗಿ ಬೌಲಿಂಗ್ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕೈ ಪಾಕಿಸ್ತಾನದ ಉಗ್ರರ ಜೊತೆಗಿದೆ. ಅದು ಹಿಂದೂಗಳ ಹತ್ಯೆಕೋರರನ್ನು ರಕ್ಷಿಸುತ್ತಿದೆನಿಶಿಕಾಂತ್ ದುಬೆ, ಬಿಜೆಪಿ ಸಂಸದ
ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ಇದೆ ಎಂದು ಸಂದೇಶ ರವಾನಿಸುವ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಪಕ್ಷವು ಲಷ್ಕರ್–ಎ–ಪಾಕಿಸ್ತಾನ್ ಕಾಂಗ್ರೆಸ್ ಆಗಿ ಬದಲಾಗುತ್ತಿದೆಗೌರವ್ ಭಾಟಿಯಾ, ಬಿಜೆಪಿಯ ರಾಷ್ಟ್ರೀಯ ವಕ್ತಾರ
ನರೇಂದ್ರ ಮೋದಿ ಅವರು ಭಯೋತ್ಪಾದಕ ದಾಳಿ ನಂತರ ಕರೆದ ಸರ್ವ ಪಕ್ಷ ಸಭೆಗೆ ಗೈರಾಗಿ ಅದೇ ಸಮಯದಲ್ಲಿ ಬಿಹಾರದಲ್ಲಿ ಚುನಾವಣಾ ರ‍್ಯಾಲಿ ನಡೆಸಲು ಸಮಯ ಮಾಡಿಕೊಂಡಿದ್ದರುಜೈರಾಮ್ ರಮೇಶ್, ಕಾಂಗ್ರೆಸ್ ಹಿರಿಯ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.