ADVERTISEMENT

ಮೋದಿ ವಿಡಿಯೊ ಸಂವಾದದಲ್ಲಿ ಭಾಗವಹಿಸದ ಪಿಣರಾಯಿ ವಿರುದ್ಧ ಕೇರಳ ಬಿಜೆಪಿ ಆಕ್ಷೇಪ

ಪಿಟಿಐ
Published 28 ಏಪ್ರಿಲ್ 2020, 1:47 IST
Last Updated 28 ಏಪ್ರಿಲ್ 2020, 1:47 IST
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್    

ತಿರುವನಂತಪುರ: ಕೋವಿಡ್–19 ನಿಯಂತ್ರಣ ಮತ್ತು ಲಾಕ್‌ಡೌನ್ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿಡಿಯೊ ಸಂವಾದದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಇಡೀ ದೇಶವು ಕೊರೊನಾ ವಿರುದ್ಧ ಹೋರಾಡುತ್ತಿರುವಾಗ ಕೇರಳ ಮುಖ್ಯಮಂತ್ರಿಗಳು ಸಂವಾದದಲ್ಲಿ ಭಗವಹಿಸದಿರುವುದು ಸರಿಯಲ್ಲ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.

‘ಕಳೆದ ಬಾರಿಯ ಸಂವಾದದಲ್ಲಿ ಪಾಲ್ಗೊಂಡಿದ್ದೆ. ಹಾಗಾಗಿ ಈ ಬಾರಿ ಭಾಗವಹಿಸಿಲ್ಲ ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ. ಆದಾಗ್ಯೂ, ಕಳೆದ ಬಾರಿಯ ಸಂವಾದದಲ್ಲಿ ಪಾಲ್ಗೊಂಡ ಹೆಚ್ಚಿನ ಮುಖ್ಯಮಂತ್ರಿಗಳು ನಿನ್ನೆಯೂ ಇದ್ದರು. ಇಡೀ ದೇಶವು ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ಪಿಣರಾಯಿ ಗೈರಾಗಿರುವುದನ್ನು ಸಮರ್ಥಿಸಲಾಗದು’ ಎಂದು ಸುರೇಂದ್ರನ್ ಹೇಳಿದ್ದಾರೆ.

ADVERTISEMENT

ಈ ಮಧ್ಯೆ, ಕೋವಿಡ್ ಕುರಿತ ಮಾಹಿತಿ ನೀಡಲು ಪ್ರತಿ ದಿನ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ, ‘ಪ್ರಧಾನಿ ಸಂವಾದದಲ್ಲಿ ಕೆಲವೇ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡುವುದಾಗಿ ಕೇಂದ್ರ ಸಂಪುಟ ಕಾರ್ಯದರ್ಶಿ ನಮಗೆ ಭಾನುವಾರ ತಿಳಿಸಿದ್ದರು. ವಿಡಿಯೊ ಸಂವಾದದಲ್ಲಿ ಮಾತನಾಡಲು ಬಯಸುವ ವಿಷವನ್ನು ಹಂಚಿಕೊಳ್ಳಲು ನಮಗೆ ಸೂಚಿಸಲಾಗಿತ್ತು. ಆ ಕುರಿತು ಕೇಂದ್ರ ಸಂಪುಟ ಕಾರ್ಯದರ್ಶಿಗೆ ಭಾನುವಾರವೇ ಮಾಹಿತಿ ನೀಡಿದ್ದೆವು’ ಎಂದು ಹೇಳಿದ್ದಾರೆ.

ಪ್ರಧಾನಿ ಜತೆಗಿನ ಸಂವಾದದಲ್ಲಿ 9 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ದೊರೆತಿತ್ತು. ಕೇರಳ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಸಂವಾದದಲ್ಲಿ ಭಾಗವಹಿಸಿದ್ದರು.

ಪಿಣರಾಯಿ ಅವರು ಸಂವಾದದಲ್ಲಿ ಭಾಗವಹಿದ ಬಗ್ಗೆ ಕೇರಳ ಸರ್ಕಾರವು ಭಾನುವಾರವೇ ಕೇಂದ್ರ ಸಂಪುಟ ಕಾರ್ಯದರ್ಶಿಗೆ ಮಾಹಿತಿ ನೀಡಿತ್ತು.

ಲಾಕ್‌ಡೌನ್‌ ಅನ್ನು ಮೇ 15ರ ವರೆಗೂ ಭಾಗಶಃ ವಿಸ್ತರಿಸಬಹುದು ಎಂದು ಕೇರಳ ಸರ್ಕಾರ ತಿಳಿಸಿದೆ ಎಂದೂ ಪಿಣರಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.