ADVERTISEMENT

ರಾಹುಲ್ ಗಾಂಧಿ ಸ್ಥಳೀಯ ಗೂಂಡಾ ರೀತಿ ಮಾತನಾಡುತ್ತಿದ್ದಾರೆ: ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2025, 13:15 IST
Last Updated 29 ಅಕ್ಟೋಬರ್ 2025, 13:15 IST
   

ನವದೆಹಲಿ: ‘ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಾದರೂ ಮಾಡುತ್ತಾರೆ’ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ರಾಹುಲ್ ಗಾಂಧಿ ಸ್ಥಳೀಯ ಗೂಂಡಾ ರೀತಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.

ರಾಹುಲ್ ಗಾಂಧಿ ತಮ್ಮ ಹೇಳಿಕೆಗಳಿಂದ ಮತದಾರರನ್ನು ಅಣಕಿಸಿದ್ದಾರೆ. ಬಡವರನ್ನು ಅವಮಾನಿಸಿದ್ದಾರೆ ಎಂದು ಭಂಡಾರಿ ಆರೋಪಿಸಿದ್ದಾರೆ.

'ರಾಹುಲ್ ಗಾಂಧಿ ಸ್ಥಳೀಯ ಗೂಂಡಾ ರೀತಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತದ ಪ್ರತಿಯೊಬ್ಬ ಬಡವರನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದ ಬಿಹಾರಿಗರನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ!. ರಾಹುಲ್ ಗಾಂಧಿ ಮತದಾರರನ್ನು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಅಣಕಿಸಿದ್ದಾರೆ’ಎಂದು ಬಿಜೆಪಿ ನಾಯಕ ಎಕ್ಸ್ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.

ADVERTISEMENT

‘ಮತಗಳಿಗಾಗಿ ನಾಟಕ ಮಾಡಲು ಹೇಳಿದರೂ ಮೋದಿ ಮಾಡುತ್ತಾರೆ. ಮತಕ್ಕಾಗಿ ಹೇಳಿದ್ದೆಲ್ಲ ಮಾಡುತ್ತಾರೆ. ನೀವು ನರೇಂದ್ರ ಮೋದಿಗೆ ನೃತ್ಯ ಮಾಡಲು ಹೇಳಿದರೆ. ಅವರು ಅದನ್ನೂ ಮಾಡುತ್ತಾರೆ’ ಎಂದು ರಾಹುಲ್ ವ್ಯಂಗ್ಯ ಮಾಡಿದ್ದರು.

ಬಿಹಾರ ವಿಧಾನಸಭಾ ಚುನಾವಣೆಗೆ ತಮ್ಮ ಪ್ರಚಾರ ಆರಂಭಿಸಿದ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಜಂಟಿ ರ್‍ಯಾಲಿಯನ್ನು ಉದ್ದೇಶಿಸಿ ರಾಹುಲ್ ಮಾತನಾಡಿದರು.

ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಎಲ್ಲ ಸಣ್ಣ ಉದ್ಯಮಗಳನ್ನು ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.

‘ನಿಮ್ಮ ಮೊಬೈಲ್ ಫೋನ್‌ನ ಹಿಂಭಾಂಗದಲ್ಲಿ ಏನು ಬರೆದಿದೆ? ಮೇಡ್ ಇನ್ ಚೀನಾ ಎಂದಲ್ಲವೇ? ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಪರಿಚಯಿಸುವ ಮೂಲಕ ಮೋದಿ ದೇಶದ ಸಣ್ಣ ಉದ್ಯಮಗಳನ್ನು ನಾಶ ಮಾಡಿದ್ದಾರೆ. ಮೇಡ್ ಇನ್ ಚೀನಾ ಎಂದು ಎಲ್ಲಿ ಬರೆದಿದೆಯೋ ಅಲ್ಲೆಲ್ಲ ಮೇಡ್ ಇನ್ ಬಿಹಾರ ಎಂದು ಬರೆದಿರಬೇಕಿತ್ತು. ಮೋಬೈಲ್‌, ಶರ್ಟ್, ಪ್ಯಾಂಟ್ ಮುಂತಾದ ಎಲ್ಲ ಉತ್ಪಾದನೆ ಬಿಹಾರದಲ್ಲಿ ಆಗಬೇಕು. ಅಂತಹ ಕಾರ್ಖಾನೆಗಳಲ್ಲಿ ಬಿಹಾರದ ಯುವಕರಿಗೆ ಕೆಲಸ ಸಿಗಬೇಕು. ಅಂತಹ ಬಿಹಾರ ನಮಗೆ ಬೇಕಿದೆ’ ಎಂದು ರಾಹುಲ್ ಹೇಳಿದ್ದರು.

ನವೆಂಬರ್ 6 ಮತ್ತು 14ರಂದು ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 14ಕ್ಕೆ ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.