ADVERTISEMENT

ಜಹಾಂಗೀರ್‌ಪುರಿ ಹಿಂಸಾಚಾರದ ಹಿಂದೆ ಬಿಜೆಪಿ ಕೈವಾಡವಿದೆ: ಆಮ್ ಆದ್ಮಿ ಪಕ್ಷ

ಪಿಟಿಐ
Published 18 ಏಪ್ರಿಲ್ 2022, 2:48 IST
Last Updated 18 ಏಪ್ರಿಲ್ 2022, 2:48 IST
   

ನವದೆಹಲಿ: ದೆಹಲಿಯ ವಾಯವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ರೊಹಿಂಗ್ಯಾ ಮತ್ತು ಬಾಂಗ್ಲಾದೇಶದ ವಲಸಿಗರು ತಂಗಲು ಎಎಪಿ ಸರ್ಕಾರ ಅಕ್ರಮವಾಗಿ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವಾಗಿ ಹಿಂಸಾಚಾರ ನಡೆದಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದ ಬೆನ್ನಲ್ಲೇ ಎಎಪಿ ಈ ಹೇಳಿಕೆ ನೀಡಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವವರಲ್ಲಿ ಓರ್ವ ಎಎಪಿ ಕಾರ್ಯಕರ್ತ ಎಂದೂ ಆರೋಪಿಸಿದ್ದರು.

ADVERTISEMENT

ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಶೋಭಾ ಯಾತ್ರೆಯಲ್ಲಿ ಶನಿವಾರ ಸಂಜೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಎರಡೂ ಸಮುದಾಯಗಳ ನಡುವೆ ಘರ್ಷಣೆ ಆರಂಭವಾಗಿತ್ತು. ಈ ವೇಳೆ ನಡೆದ ಕಲ್ಲುತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಉದ್ರಿಕ್ತರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಸಂಬಂಧ ಈವರೆಗೆ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ.

ಗ್ರೇಟರ್ ಕೈಲಾಶ್‌ ಪ್ರದೇಶದಲ್ಲಿ ಕೂಡ ಹನುಮ ಜಯಂತಿಯನ್ನು ಆಚರಿಸಲಾಯಿತು ಮತ್ತು ಶೋಭಾ ಯಾತ್ರೆಯನ್ನು ಕೈಗೊಳ್ಳಲಾಯಿತು. ಇದು ಹೃದಯಸ್ಪರ್ಶಿ ಅಂತರಧರ್ಮದ ಬಾಂಧವ್ಯ ಮತ್ತು ಗೌರವಕ್ಕೆ ಸಾಕ್ಷಿಯಾಯಿತು. ಬಳಿಕ ಗೋಲ್ ಮಾರ್ಕೆಟ್ ಪ್ರದೇಶದಲ್ಲಿ ಸುಂದರಕಾಂಡ ಪಠಣವನ್ನು ಆಯೋಜಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತಿಳಿಸಿದೆ.

'ಅಂತಹ ಹಿಂಸಾಚಾರಗಳು ಎಎಪಿಯ ಕಾರ್ಯಕ್ರಮಗಳಲ್ಲಿ ನಡೆಯುವುದಿಲ್ಲ ಮತ್ತು ಬಿಜೆಪಿ ಅದನ್ನು ಆಯೋಜಿಸಿದಾಗ ಮಾತ್ರ ಏಕೆ ನಡೆಯುತ್ತವೆ? ಎಂದು ಎಎಪಿ ಪ್ರಶ್ನಿಸಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಗುಪ್ತಾ ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿಯ ನಿವಾಸದ ಹೊರಗೆ 'ವಿಧ್ವಂಸಕ ಕೃತ್ಯ ಮತ್ತು ಗೂಂಡಾಗಿರಿಗಾಗಿ ಬಂಧಿಸಲಾದ 8 ಗೂಂಡಾಗಳನ್ನು' ಸನ್ಮಾನಿಸಿದ್ದರು. 'ಇತ್ತೀಚಿನ ಘಟನೆಗಳು ಹೇಗೆ ಹೊರಬಂದಿವೆ ಎಂಬುದನ್ನು ನೋಡಿದರೆ, ಹಿಂಸಾಚಾರದ ಹಿಂದೆ ಬಿಜೆಪಿಯೇ ಇದೆ ಎಂಬುದು ಸ್ಪಷ್ಟವಾಗಿದೆ' ಎಂದು ಎಎಪಿ ಆರೋಪಿಸಿದೆ.

ದೆಹಲಿ ಬಿಜೆಪಿ ಅಧ್ಯಕ್ಷರು ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಎಂಟು ಕಾರ್ಯಕರ್ತರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಹಿಂಸಾಚಾರದ ಪರವಾಗಿ ನಿಲ್ಲುವ ಸಂದೇಶವನ್ನು ಜನಸಾಮಾನ್ಯರಿಗೆ ರವಾನಿಸಿದ್ದಾರೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.