ADVERTISEMENT

ಇವಿಎಂನಲ್ಲಿ 'ಕಮಲ'ದ ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿದೆ: ವಿಪಕ್ಷಗಳಿಂದ ದೂರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 7:59 IST
Last Updated 28 ಏಪ್ರಿಲ್ 2019, 7:59 IST
ದಿನೇಶ್ ತ್ರಿವೇದಿ ಮಾಧ್ಯಮಳನ್ನುದ್ದೇಶಿಸಿ ಮಾತನಾಡುತ್ತಿರುವುದು
ದಿನೇಶ್ ತ್ರಿವೇದಿ ಮಾಧ್ಯಮಳನ್ನುದ್ದೇಶಿಸಿ ಮಾತನಾಡುತ್ತಿರುವುದು   

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ ಬಿಜೆಪಿಯ ಕಮಲದ ಚಿಹ್ನೆಯ ಕೆಳಗೆ ಬಿಜೆಪಿ ಎಂದು ಬರೆದಿದೆ. ಇದರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಶನಿವಾರ ದೂರುನೀಡಿವೆ.

ಕಾಂಗ್ರೆಸ್‍ನ ಅಭಿಷೇಕ್ ಮನು ಸಾಂಘ್ವಿ, ತೃಣಮೂಲ ಕಾಂಗ್ರೆಸ್‌ನ ದಿನೇಶ್ ತ್ರಿವೇದಿ ಮತ್ತು ಡೆರಿಕ್ ಒ ಬ್ರೇನ್ ಅವರ ನೇತೃತ್ವದಲ್ಲಿ 10 ಪಕ್ಷಗಳ ನಾಯಕರ ತಂಡವು ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರನ್ನು ಭೇಟಿ ಮಾಡಿ ಬಿಜೆಪಿಯ ಹೆಸರನ್ನು ಮತಯಂತ್ರದಿಂದ ತೆಗೆಯಬೇಕು ಇಲ್ಲವೇ ಇನ್ನುಳಿದ ಪಕ್ಷಗಳ ಚಿಹ್ನೆ ಜತೆ ಪಕ್ಷಗಳ ಹೆಸರು ಸೇರಿಸಬೇಕು ಎಂದು ಒತ್ತಾಯಿಸಿವೆ.

ಇವಿಎಂನಲ್ಲಿ ಕಮಲದ ಚಿಹ್ನೆ ಕೆಳಗೆ ಬಿಜೆಪಿ ಎಂದು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಒಂದು ಪಕ್ಷವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಜತೆಯಾಗಿ ಬಳಸಬಾರದು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಾಂಘ್ವಿ ಹೇಳಿದ್ದಾರೆ.

ADVERTISEMENT
ಕಾಂಗ್ರೆಸ್ ಆರೋಪಿಸುತ್ತಿರುವ ಚಿತ್ರ ಇದು (ಕೃಪೆ:ಎನ್‌ಡಿಟಿವಿ)

ಆದರೆ ಬಿಜೆಪಿ ಚಿಹ್ನೆ ಕೆಳಗೆ ಪಕ್ಷದ ಹೆಸರು ಇಲ್ಲ. ವಿಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ಹೇಳಿದ್ದಾರೆ.

ತಮ್ಮ ಪಕ್ಷದ ಚಿಹ್ನೆಯ ಔಟ್‌ಲೈನ್ ತುಂಬಾ ತೆಳುವಾಗಿದ್ದು ಅದನ್ನು ದಪ್ಪ ಮಾಡಲು ಅವಕಾಶ ನೀಡಬೇಕೆಂದು 2013ರ ಮಧ್ಯಾವಧಿಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಈ ವಿನಂತಿ ಮೇರೆಗೆ ಔಟ್‌ಲೈನ್‌ನ್ನು ದಪ್ಪ ಮಾಡಿ, ಕಮಲದ ಚಿಹ್ನೆ ಕಳಗೆ ನೀರು ತೋರಿಸುವಂತೆ ಚಿತ್ರಿಸಲಾಯಿತು.ಕಮಲದ ಚಿಹ್ನೆ ಕೆಳಗಿರುವ ನೀರಿನ ಚಿತ್ರ ಇಂಗ್ಲಿಷ್ ಅಕ್ಷರ್ ಎಫ್ ಮತ್ತು ಪಿ ಯಂತೆ ಕಾಣುತ್ತದೆ. ಅದು ಬಿಜೆಪಿ ಎಂದು ಬರೆದಿಲ್ಲ.2014ರಿಂದಲೇ ಬಿಜೆಪಿಯ ಚಿಹ್ನೆ ಹೀಗಿದೆ ಎಂದಿದ್ದಾರೆ ಹಿರಿಯ ಅಧಿಕಾರಿ.

ಆದರೆ, ಇವಿಎಂಗಳನ್ನು ಬದಲಿಸುವುದಿಲ್ಲಎಂದು ಆಯೋಗದ ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.