ADVERTISEMENT

ಕೇರಳ ಮಿನಿ ಪಾಕಿಸ್ತಾನ; ಹೀಗಾಗಿ ರಾಹುಲ್, ಪ್ರಿಯಾಂಕಾ ಗೆದ್ದರು: BJP ನಾಯಕ ರಾಣೆ

ಸಚಿವ ನಿತೇಶ್ ರಾಣೆ ಹೇಳಿಕೆಗೆ ವಿಪಕ್ಷಗಳಿಂದ ಟೀಕೆ * ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 9:07 IST
Last Updated 30 ಡಿಸೆಂಬರ್ 2024, 9:07 IST
<div class="paragraphs"><p>ನಿತೇಶ್ ರಾಣೆ</p></div>

ನಿತೇಶ್ ರಾಣೆ

   

– ಪಿಟಿಐ ಚಿತ್ರ

ಮುಂಬೈ: ‘ಕೇರಳ ಒಂದು ಮಿನಿ ಪಾಕಿಸ್ತಾನ. ಅದಕ್ಕೇ ಅಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಿಗೆ ಮತ ಹಾಕಿದವರು ಭಯೋತ್ಪಾದಕರು’ ಎಂದು ಮಹಾರಾಷ್ಟ್ರದ ಮೀನುಗಾರಿಕೆ ಹಾಗೂ ಬಂದರು ಅಭಿವೃದ್ಧಿ ಸಚಿವರೂ ಆಗಿರುವ ಬಿಜೆಪಿ ಮುಖಂಡ ನಿತೇಶ್ ರಾಣೆ ಹೇಳಿದ್ದಾಗಿ ಮಾಧ್ಯಮವೊಂದು ಮಾಡಿರುವ ವರದಿಯು ಕಿಡಿ ಹೊತ್ತಿಸಿದೆ.

ADVERTISEMENT

ಅವರ ಹೇಳಿಕೆಯನ್ನು ವಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಮಹಾ ವಿಕಾಸ್ ಆಘಾಡಿ (ಎಂವಿಎ) ಟೀಕಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಇಂತಹ ಅತಿರೇಕದ ಮಾತನ್ನು ಗಮನಿಸಬೇಕು ಎಂದು ಆಗ್ರಹಿಸಿವೆ. 

ಬಿಜಾಪುರದ ಜನರಲ್ ಅಫಜಲ್ ಖಾನ್‌ನನ್ನು ಛತ್ರಪತಿ ಶಿವಾಜಿ ಹತ್ಯೆ ಮಾಡಿದ ದಿನದ ಸ್ಮರಣಾರ್ಥ ಪುಣೆಯಲ್ಲಿ ನಡೆದ ‘ಶಿವ ಪ್ರತಾಪ್ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ರೀತಿ ಟೀಕಿಸಿದರು. 

ತಮ್ಮ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ನಂತರ ಅವರು ತಾವು ಆಡಿದ ಮಾತನ್ನು ಈ ರೀತಿ ಸಮರ್ಥಿಸಿಕೊಂಡರು: ‘ಕೇರಳ ಕೂಡ ನಮ್ಮ ದೇಶದ ಭಾಗವೇ ಹೌದು. ಅಲ್ಲಿ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದಕ್ಕೆ ಎಲ್ಲರೂ ಆತಂಕಪಡಬೇಕು. ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಗಳಿಗೆ ಅಲ್ಲಿ ನಿತ್ಯ ಮತಾಂತರ ಮಾಡಲಾಗುತ್ತಿದೆ. ಲವ್ ಜಿಹಾದ್ ಪ್ರಕರಣಗಳೂ ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ವಿಷಯದಲ್ಲಿ ಹೇಗೆ ವರ್ತಿಸುತ್ತಿದ್ದಾರೆಯೋ ಅದೇ ಪರಿಸ್ಥಿತಿ ಮುಂದೆ ಕೇರಳದಲ್ಲಿ ಉದ್ಭವಿಸಲಿದೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ. ನಾನು ಹೇಳಿರುವುದನ್ನು ಸುಳ್ಳು ಎಂದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಸಾಬೀತುಪಡಿಸಲಿ.’

ಕೇರಳದಲ್ಲಿ ಮುಂದಿನ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸುವುದಿಲ್ಲವೇ ಎಂದು ಜೆ.ಪಿ. ನಡ್ಡಾ ಅವರನ್ನು ಕೇಳಬೇಕು. ಸಂವಿಧಾನ ವಿರೋಧಿ ಹೇಳಿಕೆಗಳನ್ನು ಪದೇ ಪದೇ ನೀಡಲಾಗುತ್ತಿದೆ.
–ಪವನ್ ಖೇರಾ, ಕಾಂಗ್ರೆಸ್ ವಕ್ತಾರ
ದೇಶದ ದೊಡ್ಡ ಸಾಕ್ಷರ ರಾಜ್ಯದ ಹೆಸರಿಗೆ ನಿರಕ್ಷರ ಕುಕ್ಷಿ ನಿತೇಶ್ ರಾಣಾ ನಿರ್ಲಜ್ಜೆಯಿಂದ ಕಳಂಕ ತರುವ ಮಾತನಾಡಿದ್ದಾರೆ.
–ಕ್ಲಾಯಿಡ್ ಕ್ರಾಸ್ಟೊ, ಎಸ್‌ಪಿ ವಕ್ತಾರ
ನಮ್ಮದೇ ದೇಶದ ರಾಜ್ಯವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದವರನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ, ಪ್ರಧಾನಿ ಹೇಳಬೇಕು
–ಅತುಲ್ ಲೋಂಢೆ‌, ಕಾಂಗ್ರೆಸ್ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.