
ನವದೆಹಲಿ: ಜವಾಹರಲಾಲ್ ನೆಹರೂ ಅವರ ವಿರುದ್ಧ ಗೃಹ ಸಚಿವ ಅಮಿತ್ ಶಾ ಮಾಡಿರುವ ‘ಮತಕಳವು’ ಆರೋಪವನ್ನು ‘ಅಪ್ಪಟ ಸುಳ್ಳು’ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಮಹಾತ್ಮಾ ಗಾಂಧಿ ಅವರ ಮೊಮ್ಮಗ, ಇತಿಹಾಸಕಾರ ರಾಜಮೋಹನ ಗಾಂಧಿ ಅವರ ಹೇಳಿಕೆ ಉಲ್ಲೇಖಿಸಿ, ಗೃಹ ಸಚಿವರಿಗೆ ತಿರುಗೇಟು ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರಾಜಮೋಹನ ಅವರ ವಿಡಿಯೊ ಕ್ಲಿಪ್‌ವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ‘ಖ್ಯಾತ ಇತಿಹಾಸಕಾರ ರಾಜಮೋಹನ ಗಾಂಧಿ ಅವರು ಶಾ ಅವರ ಸುಳ್ಳನ್ನು ಬಯಲು ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘1946ರಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸಲು ಪ್ರದೇಶ ಕಾಂಗ್ರೆಸ್ ಸಮಿತಿಯು ಒಲವು ತೋರಿತ್ತು. ಆ ಸಮಯದಲ್ಲಿ ಪ್ರಧಾನಿ ಹುದ್ದೆಯ ಪ್ರಶ್ನೆಯೇ ಇರಲಿಲ್ಲ’ ಎಂದು ರಾಜಮೋಹನ ಅವರು ಸ್ಪಷ್ಟಪಡಿಸಿರುವುದು ವಿಡಿಯೊದಲ್ಲಿದೆ.
‘ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಾಗ, ನೆಹರೂ ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಸರ್ಕಾರ ರಚಿಸಲು ಅವರನ್ನು ಆಹ್ವಾನಿಸಲಾಯಿತು. ನೆಹರೂ ಪ್ರಧಾನಿ ಆದಾಗ ಜನರು ತುಂಬಾ ಸಂತೋಷಪಟ್ಟಿದ್ದರು. ಸರ್ದಾರ್ ಪಟೇಲ್ ಕೂಡಾ ನೆಹರೂ ಅವರ ಪರವಾಗಿದ್ದರು’ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುವಾಗ ಶಾ ಅವರು ನೆಹರೂ ವಿರುದ್ಧ ‘ಮತಕಳವು’ ಆರೋಪ ಮಾಡಿದ್ದರು.
‘ಸ್ವಾತಂತ್ರ್ಯ ನಂತರ ಪ್ರಧಾನಿ ಆಯ್ಕೆಗೆ ಕಾಂಗ್ರೆಸ್ ಸಭೆ ನಡೆದಿತ್ತು. ಆ ಸಭೆಯಲ್ಲಿ 28 ಮಂದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಬೆಂಬಲಿಸಿದ್ದರು. ನೆಹರೂ ಅವರಿಗೆ ಬೆಂಬಲ ಸಿಕ್ಕಿದ್ದು ಇಬ್ಬರದ್ದೇ. ಆದರೆ, ಪ್ರಧಾನಿ ಆಗಿದ್ದು ನೆಹರೂ. ಇದು ಮತ ಕಳವು ಅಲ್ಲವೇ’ ಎಂದು ಛೇಡಿಸಿದ್ದರು.
ಸಂಸತ್ತಿನಲ್ಲಿ ‘ವಂದೇ ಮಾತರಂ’ ಕುರಿತ ಚರ್ಚೆಯ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸುವ ಬಿಜೆಪಿಯ ತಂತ್ರಗಾರಿಕೆ ವಿಫಲಗೊಂಡಿದೆ.– ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.