ಚೊನ್ಜಿನ್ ಆಂಗ್ಮೋ
( ಇನ್‍ಸ್ಟಾಗ್ರಾಂ ಚಿತ್ರ)
ಶಿಮ್ಲಾ: ಹಿಮಾಚಲ ಪ್ರದೇಶದ ದೃಷ್ಟಿಹೀನ ಮಹಿಳೆ ಚೊನ್ಜಿನ್ ಆಂಗ್ಮೋ, ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಮೊದಲ ಅಂಧ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಿನ್ನೌರ್ ಜಿಲ್ಲೆಯ ಹಳ್ಳಿಯೊಂದರ ಬುಡಕಟ್ಟು ಸಮುದಾಯಕ್ಕೆ ಸೇರಿದ ಚೊನ್ಜಿನ್ ಆಂಗ್ಮೋ, ಕುರುಡುತನ ದೌರ್ಬಲ್ಯವಲ್ಲ. ತನ್ನ ಕನಸುಗಳಿಗೆ ದೃಷ್ಟಿಹೀನತೆ ಎಂದೂ ಅಡ್ಡಿಯಾಗಿಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
ಸೋಮವಾರ, ಅವರು ಜಗತ್ತಿನ ಅತಿ ಎತ್ತರದ ಪರ್ವತದ ಮೇಲೆ ತ್ರಿವರ್ಣ ಧ್ವಜವನ್ನು ನೆಟ್ಟು ಸಂಭ್ರಮಿಸಿದ್ದಾರೆ. ಈ ಮೂಲಕ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮತ್ತು ವಿಶ್ವದ 5ನೇ ದೃಷ್ಟಿಹೀನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಭಾರತ-ಟಿಬೆಟ್ ಗಡಿಯಲ್ಲಿರುವ ಚಾಂಗೊ ಗ್ರಾಮದಲ್ಲಿ ಜನಿಸಿದ ಆಂಗ್ಮೋ 8 ವರ್ಷದವಳಿದ್ದಾಗ ದೃಷ್ಟಿ ಕಳೆದುಕೊಂಡರು. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ, ಅವರು ದೆಹಲಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಹಕ ಸೇವಾ ಸಹವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
'ನನ್ನ ಮಗಳು ನನ್ನನ್ನು ಹೆಮ್ಮೆಪಡುವಂತೆ ಮಾಡಿದ್ದಾಳೆ. ಅವಳ ಸಾಧನೆಯ ಬಗ್ಗೆ ನಾವೆಲ್ಲರೂ ತುಂಬಾ ಹೆಮ್ಮೆ ಪಡುತ್ತೇವೆ. ಅವಳ ಬರುವಿಕೆಗಾಗಿ ಕಾಯುತ್ತಿದ್ದೇವೆ' ಎಂದು ಚೊನ್ಜಿನ್ ಆಂಗ್ಮೋ ತಂದೆ ಅಮರ್ ಚಂದ್ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.
ಈವರೆಗೆ ಐವರು ಅಂಧರು ಎವರೆಸ್ಟ್ ಏರಿ ಸಾಧನೆ ಮೆರೆದಿದ್ದಾರೆ. ಎವರೆಸ್ಟ್ ಏರಿದ ಮೊದಲ ದೃಷ್ಟಿಹೀನ ವ್ಯಕ್ತಿ ಯುನೈಟೆಡ್ ಸ್ಟೇಟ್ಸ್‌ನ ಎರಿಕ್ ವೀಹೆನ್‌ಮೇಯರ್. 2001ರಲ್ಲಿ ಅವರು ಪರ್ವತದ ತುತ್ತತುದಿಯನ್ನು ತಲುಪಿದ್ದರು. ಬಳಿಕ 2017ರಲ್ಲಿ ಆಸ್ಟ್ರಿಯನ್ ಆಂಡಿ ಹೋಲ್ಜರ್, 2021ರಲ್ಲಿ ಚೀನಾದ ಜಾಂಗ್ ಹಾಂಗ್(ಎವರೆಸ್ಟ್ ಏರಿದ ಮೊದಲ ಅಂಧ ಮಹಿಳೆ), 2023ರಲ್ಲಿ ಅಮೆರಿಕದ ಲೋನಿ ಬೆಡ್‌ವೆಲ್ ಹಾಗೂ 2025ರಲ್ಲಿ ಚೊನ್ಜಿನ್ ಆಂಗ್ಮೋ(ಎವರೆಸ್ಟ್ ಏರಿದ 2ನೇ ಅಂಧ ಮಹಿಳೆ) ಅವರು ಈ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.