ADVERTISEMENT

ಜೆಎನ್‌ಯುನಲ್ಲಿ ದಾಂದಲೆ: ಅಂಧ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಮುಸುಕುಧಾರಿಗಳು

ಏಜೆನ್ಸೀಸ್
Published 6 ಜನವರಿ 2020, 10:43 IST
Last Updated 6 ಜನವರಿ 2020, 10:43 IST
ಜೆಎನ್‌ಯು ವಿದ್ಯಾರ್ಥಿ ಸೂರ್ಯ ಪ್ರಕಾಶ್  ( ಎಎನ್‌ಐ ಫೋಟೊ)
ಜೆಎನ್‌ಯು ವಿದ್ಯಾರ್ಥಿ ಸೂರ್ಯ ಪ್ರಕಾಶ್ ( ಎಎನ್‌ಐ ಫೋಟೊ)   

ನವದೆಹಲಿ: ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ರಾಡ್‌ ಮತ್ತು ಬೆತ್ತ ಹಿಡಿದಿದ್ದ ದೊಡ್ಡ ಗುಂಪು ಭಾನುವಾರ ಸಂಜೆಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣಕ್ಕೆ ನುಗ್ಗಿ ದಾಂದಲೆ ನಡೆಸಿತ್ತು. ಈ ವೇಳೆ ಜೆಎನ್‌ಯುನಲ್ಲಿರುವಅಂಧ ವಿದ್ಯಾರ್ಥಿ ಮೇಲೆಹಲ್ಲೆ ನಡೆದಿದೆ.

ಕ್ಯಾಂಪಸ್ ಒಳಗೆ ನುಗ್ಗಿದ ಗುಂಪು ಘೋಷಣೆ ಕೂಗಿ ಹೊರಹೋಗಬಹುದು ಎಂದು ಭಾವಿಸಿದ್ದೆವು. ಆದರೆ ಅವರು ಅಲ್ಲಿದಾಂದಲೆ ನಡೆಸಿದ್ದಾರೆ.ಬೆತ್ತ ಮತ್ತು ರಾಡ್‌ನಿಂದ ಅವರು ನನಗೆ ಹೊಡೆದರು. ನಾನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ (ಏಮ್ಸ್‌) ಟ್ರಾಮಾ ಸೆಂಟರ್‌ಗೆ ಹೋದೆ. ಅಲ್ಲಿಗೆ ಹಲವಾರು ವಿದ್ಯಾರ್ಥಿಗಳು ಬಂದಿದ್ದರು ಎಂದು ಅಂಧ ವಿದ್ಯಾರ್ಥಿ ಸೂರ್ಯ ಪ್ರಕಾಶ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾನು ನನ್ನ ಕುಟುಂಬದವರಲ್ಲಿ ಮಾತನಾಡಿದೆ. ಇಲ್ಲಿನ ಪರಿಸ್ಥಿತಿ ಬಗ್ಗೆ ಅವರು ಚಿಂತಿತರಾಗಿದ್ದಾರೆ. ನಾನು ಕಳೆದ ವರ್ಷ ರಾಷ್ಟೀಯ ಅರ್ಹತಾ ಪರೀಕ್ಷೆ (ನೆಟ್) ಬರೆದಿದ್ದೆ.ನಾನು ಇಲ್ಲಿ ರಿಸರ್ಚ್ ಮಾಡುತ್ತಿದ್ದೇನೆ. ಈ ರೀತಿಯ ಭಯದ ವಾತಾವರಣವಿರುವಾಗ ನಮಗೇನು ಮಾಡಲು ಸಾಧ್ಯ? ಮಾಧ್ಯಮಗಳ ಮುಂದೆ ಬರಬಾರದು ಎಂದು ಹಲವಾರು ಬೆದರಿಕೆ ಕರೆಗಳು ಬರುತ್ತಿವೆ. ನಾನು ಅಂಧ ವಿದ್ಯಾರ್ಥಿ ಆಗಿರುವುದರಿಂದ ಈ ಪ್ರಕರಣದ ಕೇಂದ್ರ ಬಿಂದುವಾಗಲಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ಜೆಎನ್‌ಯುನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಸಂತೋಷ್ ಭಗತ್ ಅವರು ನಿನ್ನೆ ನಡೆದ ಘಟನೆ ಬಗ್ಗೆ ವಿವರಿಸಿದ್ದು ಹೀಗೆ...ಸಂಜೆ 7 ಗಂಟೆಯ ಹೊತ್ತಿಗೆ ಮುಸುಕುಧಾರಿಗಳಾದ ವ್ಯಕ್ತಿಗಳು ಹಾಸ್ಟೆಲ್ ಒಳಗಡೆ ಬಂದರು . ಅವರ ಕೈಯಲ್ಲಿ ಬೆತ್ತ, ರಾಡ್ ಇತ್ತು. ನಾವು ಹೊರಗೆ ಹೋಗಲು ಪ್ರಯತ್ನಿಸಿದೆವು. ಆದರೆ ಅವರುಹಾಸ್ಟೆಲ್ ಒಳಗೆ ನುಗ್ಗಿ ಬಿಟ್ಟಿದ್ದರು. ನಾನು ಕೋಣೆಯ ಬಾಗಿಲು ಮುಚ್ಚಿದರೂ ದಾಳಿಕೋರರು ಬಾಗಿಲು ಒಡೆದು ನನ್ನ ಮೇಲೆ ಹಲ್ಲೆ ನಡೆಸಿದರು. ಮೊದಲ ಮಹಡಿಯಿಂದ ಅವರು ನನ್ನನ್ನು ತಳ್ಳಿ ಹಾಕಿದರು. ನಾನು ಪ್ರೊಫೆಸರ್ ಮನೆಯಲ್ಲಿ ಆಶ್ರಯ ಪಡೆದೆ. ಆಮೇಲೆ ಅಲ್ಲಿಂದ ನನ್ನನ್ನು ಏಮ್ಸ್ ‌ಗೆಕರೆದುಕೊಂಡು ಹೋದರು.

ಜೆಎನ್‌ಯುನಲ್ಲಿ ಹಾಸ್ಟೆಲ್‌ ಶುಲ್ಕ ಹೆಚ್ಚಳ, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದ್ದು, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್‌ ಘೋಷ್‌ ಮತ್ತು ಇತರ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.