
ಸಾವು
(ಪ್ರಾತಿನಿಧಿಕ ಚಿತ್ರ)
ಜೈಪುರ/ನವದೆಹಲಿ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಘಟನೆಗೆ ಎಸ್‌ಐಆರ್ ಕೆಲಸದ ಒತ್ತಡ ಕಾರಣ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ನವೆಂಬರ್ ತಿಂಗಳ ಆರಂಭದಿಂದ ಈವರೆಗೆ ದೇಶದಾದ್ಯಂತ ನಾಲ್ವರು ಬಿಎಲ್‌ಒಗಳು ಆತ್ಮಹತ್ಯೆ/ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನದ ಸೇವ್ತಿ ಖುರ್ದ್ ಸರ್ಕಾರಿ ಶಾಲೆಯಲ್ಲಿ ಗ್ರೇಡ್-3 ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಪ್ರಸ್ತುತ ಬಿಎಲ್‌ಒ ಆಗಿ ನಿಯೋಜಿತನಾಗಿದ್ದ ಹರಿರಾಂ ಅಲಿಯಾಸ್ ಹರಿಓಂ ಬೈರ್ವಾ (34) ಮೃತ ವ್ಯಕ್ತಿ. ತಹಶೀಲ್ದಾರ್ ಅವರಿಂದ ಫೋನ್ ಕರೆ ಬಂದ ಕೆಲವೇ ನಿಮಿಷಗಳ ಬಳಿಕ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೆಲಸದ ಬಗ್ಗೆ ಅಧಿಕಾರಿಗಳು ಭಾರಿ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಅವರು ಕಳೆದ ಆರು ದಿನಗಳಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ನಿರಂತರ ಕೆಲಸದ ಹೊರೆಯಿಂದಾಗಿ ಅವರು ಮನೆಯಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಹರಿರಾಂ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಹರಿರಾಂ ಭಾರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದರು ಮತ್ತು ಮುಂಜಾನೆ ಬೇಗ ಏಳುತ್ತಿದ್ದರು ಎಂದು ಅವರ ಸಹೋದರ ಆಶಿಶ್ ಬೈರ್ವಾ ಹೇಳಿದ್ದಾರೆ.
ತಹಸೀಲ್ದಾರ್ ಅವರಿಂದ ಕರೆ ಬಂತು. ಅವರು ಏನು ಹೇಳಿದರು ಎಂದು ನನಗೆ ತಿಳಿದಿಲ್ಲ. ಆದರೆ ಐದು ನಿಮಿಷಗಳ ನಂತರ ಹೃದಯಾಘಾತವಾಯಿತು ಎಂದು ಹರಿರಾಂ ಅವರ ತಂದೆ ಬ್ರಿಜ್‌ಮೋಹನ್ ಬೈರ್ವಾ ತಿಳಿಸಿದ್ದಾರೆ.
ಆದಾಗ್ಯೂ, ಈ ಎಲ್ಲಾ ಆರೋಪಗಳನ್ನು ತಹಸೀಲ್ದಾರ್ ಅವರು ನಿರಾಕರಿಸಿದ್ದಾರೆ. ಉನ್ನತ ಅಧಿಕಾರಿಗಳಿಂದ ಬಂದ ಸೂಚನೆಗಳನ್ನು ಮಾತ್ರ ನಿರ್ದೇಶಿಸಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.