ADVERTISEMENT

ವಾರಾಣಸಿಯಿಂದ ಮೋದಿ ಎದುರು ಪ್ರಿಯಾಂಕಾ ಸ್ಪರ್ಧೆ ಈ ಬಾರಿ ಅನುಮಾನ

ಏಜೆನ್ಸೀಸ್
Published 23 ಏಪ್ರಿಲ್ 2019, 6:32 IST
Last Updated 23 ಏಪ್ರಿಲ್ 2019, 6:32 IST
ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)
ಪ್ರಿಯಾಂಕಾ ಗಾಂಧಿ (ಸಂಗ್ರಹ ಚಿತ್ರ)   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ವಾರಾಣಸಿ ಕ್ಷೇತ್ರಕ್ಕೆ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ಸೋಮವಾರ ಅಭ್ಯರ್ಥಿಯನ್ನು ಪ್ರಕಟಿಸಿದೆ. ಈ ಬೆಳವಣಿಗೆಯೊಂದಿಗೆ ಈವರೆಗೆಕೇಳಿ ಬರುತ್ತಿದ್ದ‘ಪ್ರಧಾನಿ ಎದುರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಸ್ಪರ್ಧಿಸಬಹುದು’ ಎನ್ನುವ ಮಾತುಗಳು ಹೊಸ ತಿರುವು ಪಡೆದುಕೊಂಡಿವೆ.

ವಾರಾಣಾಸಿ ಕ್ಷೇತ್ರಕ್ಕೆನಾಮಪತ್ರ ಸಲ್ಲಿಸಲುಏ.22ರಿಂದ 29ರವರೆಗೆ ಅವಕಾಶವಿದೆ. ಮೇ 19ರಂದು ಮತದಾನ ನಡೆಯಲಿದೆ.ಮೋದಿ ಎದುರು ಪ್ರಬಲ ಅಭ್ಯರ್ಥಿಯನ್ನೇ ನಿಲ್ಲಿಸಿ, ಗಮನಾರ್ಹ ಸ್ಪರ್ಧೆಒಡ್ಡಬೇಕು ಎನ್ನುವುದು ಕಾಂಗ್ರೆಸ್‌ನ ಇಚ್ಛೆಯಾಗಿದೆ. ವಾರಾಣಸಿಯಿಂದ ಒಂದು ವೇಳೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಅವರಿಗೆ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರ ಬೇಷರತ್ ಬೆಂಬಲ ಬೇಕು. ಆದರೆ ಈವರೆಗೂ ಆ ನಿರೀಕ್ಷೆ ಕೈಗೂಡಿಲ್ಲ.

ಎಸ್‌ಪಿ–ಬಿಎಸ್‌ಪಿ ಮೈತ್ರಿಸೋಮವಾರಶಾಲಿನಿ ಯಾದವ್‌ರನ್ನು ಕಣಕ್ಕಿಳಿಸಿದೆ. ಈ ಹಿಂದೆ ಅವರು ವಾರಣಾಸಿಯ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಈ ಬೆಳವಣಿಗೆಯ ನಂತರ ಕಾಂಗ್ರೆಸ್‌ಗೆಮೈತ್ರಿಕೂಟದಿಂದ ಬೆಂಬಲ ಸಿಗಬಹುದು ಎನ್ನುವ ನಿರೀಕ್ಷೆ ಕಡಿಮೆಯಾಗಿದೆ. ಹೀಗಾಗಿ ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಿ, ಹೋರಾಡುವ ಕಾಂಗ್ರೆಸ್‌ನ ಕನಸು ಕೈಗೂಡುವುದು ಅನುಮಾನ ಎಂಬಂತೆಆಗಿದೆ. ಆದರೆ ಈ ಕ್ಷಣಕ್ಕೂ ಕಾಂಗ್ರೆಸ್‌ವಾರಾಣಸಿಯಿಂದ ಪ್ರಿಯಾಂಕಾರನ್ನು ನಿಲ್ಲಿಸಬೇಕು ಎನ್ನುವ ವಿಚಾರವನ್ನು ಕೈಬಿಟ್ಟಿಲ್ಲ. ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಈ ಕುರಿತು ಸ್ಪಷ್ಟ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.

ಕಳೆದ ಫೆಬ್ರುವರಿಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿ ವದ್ರಾ ಅವರಿಗೆ ವಾರಾಣಸಿ ಇರುವ ಉತ್ತರ ಪ್ರದೇಶದ ಪೂರ್ವ ಭಾಗಗಳ ಹೊಣೆಗಾರಿಕೆ ಇದೆ. ವಾರಾಣಸಿಯಿಂದ ಪ್ರಿಯಾಂಕಾ ಸ್ಪರ್ಧಿಸಬಹುದು ಎನ್ನುವ ಅನುಮಾನಗಳನ್ನು ರಾಹುಲ್ ಮತ್ತು ಪ್ರಿಯಾಂಕಾ ಉದ್ದೇಶಪೂರ್ವಕವಾಗಿಯೇ ಜೀವಂತವಾಗಿಟ್ಟಿದ್ದರು. ಪ್ರತಿಬಾರಿಯೂ ಒಬ್ಬರು ಈ ವಿಚಾರವನ್ನು ಪ್ರಸ್ತಾಪಿಸಿದರೆ, ಮತ್ತೊಬ್ಬರು ನಯವಾಗಿ ನಿರಾಕರಿಸುತ್ತಿದ್ದರು.

ಕಳೆದ ತಿಂಗಳು ಪ್ರಿಯಾಂಕಾರಾಯ್‌ಬರೇಲಿಯಿಂದಲೇ ಸ್ಪರ್ಧಿಸಬಹುದು ಎನ್ನುವ ಮಾತುಕೇಳಿ ಬಂದಿತ್ತು. ಆಗ ಪ್ರಿಯಾಂಕಾ, ‘ವಾರಾಣಸಿ ಏಕಾಗಬಾರದು’ ಎಂದು ಪ್ರತಿಕ್ರಿಯಿಸಿದ್ದರು. ‘ಪ್ರಿಯಾಂಕಾ ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು ಅವರ ಸ್ವಂತ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ ಕುತೂಹಲ ಉಳಿಸುವಲ್ಲಿ ತಪ್ಪೇನಿದೆ’ ಎಂದು ರಾಹುಲ್ ಪ್ರಶ್ನಿಸಿದ್ದರು. ‘ಕಾಂಗ್ರೆಸ್ ನಾಯಕ ಹೇಗೆ ಹೇಳಿದರೆ ಹಾಗೆ’ ಎಂದು ಪ್ರಿಯಾಂಕಾ ಚೆಂಡನ್ನು ಸೋದರನತ್ತ ತಳ್ಳಿದ್ದರು.

ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಅವರನ್ನು ನಿಲ್ಲಿಸುವುದು ಕಾಂಗ್ರೆಸ್‌ನ ಮಹತ್ವದ ತಂತ್ರಗಾರಿಕೆಯಾಗಿತ್ತು. ಪಕ್ಷದ ಒಟ್ಟಾರೆ ಸಾಧನೆಯ ಮೇಲೆ ಈ ನಿರ್ಧಾರದ ಪರಿಣಾಮಗಳ ಬಗ್ಗೆ ಬಿರುಸಿನ ಚರ್ಚೆಗಳು ನಡೆಯುತ್ತಿದ್ದವು. ಪರ–ವಿರೋಧದ ವಾದಗಳು ಬಿರುಸಾಗಿದ್ದ ಅವಧಿಯಲ್ಲಿಯೇ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪ್ರಕಟಿಸಿದೆ.

‘ವಾರಾಣಸಿಯಿಂದ ಸ್ಪರ್ಧಿಸುವುದು ಅಥವಾ ಬಿಡುವುದು ಪ್ರಿಯಾಂಕಾ ಅವರ ವೈಯಕ್ತಿಕ ನಿರ್ಧಾರ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಿಸಬೇಕು. ಇದು ತುಂಬಾ ಗಂಭೀರವಾಗಿಯೋಚಿಸಿ ತೆಗೆದುಕೊಳ್ಳಬೇಕಾದ ನಿರ್ಧಾರ’ ಎಂದು ಪಶ್ಚಿಮ ಉತ್ತರ ಪ್ರದೇಶ ಘಟಕದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ.

2014ರ ಚುನಾವಣೆಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ ನಿಲ್ಲಿಸಿದ್ದ ಅಜಯ್‌ ರೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆಗ 2 ಲಕ್ಷ ಮತ ಪಡೆದಿದ್ದ ಅರವಿಂದ್ ಕೇಜ್ರೀವಾಲ್ ದ್ವಿತೀಯ ಸ್ಥಾನದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ 5.8 ಲಕ್ಷ ಮತ ಪಡೆದಿದ್ದರು. ಚುನಾವಣೆಯಲ್ಲಿ ಸೋತರೂ ಕೇಜ್ರೀವಾಲ್ ದೇಶದಾದ್ಯಂತ ಸುದ್ದಿಯಾಗಿದ್ದರು. ನಂತರದ ಒಂದೇ ವರ್ಷದಲ್ಲಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.67 ಸ್ಥಾನಗಳನ್ನು ಆಮ್‌ ಆದ್ಮಿ ಪಾರ್ಟಿ ತನ್ನದಾಗಿಸಿಕೊಂಡಿತ್ತು.ಮುಖ್ಯಮಂತ್ರಿ ಸ್ಥಾನ ಅವರಿಗೆ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.