ADVERTISEMENT

ಬಿಎಂಸಿ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ

ಪುಣೆಯಲ್ಲಿ ಎನ್‌ಸಿಪಿ ಬಣಗಳ ಮೈತ್ರಿಯನ್ನೂ ಮಣಿಸಿದ ಕೇಸರಿ ಪಕ್ಷ

ಪಿಟಿಐ
Published 16 ಜನವರಿ 2026, 16:27 IST
Last Updated 16 ಜನವರಿ 2026, 16:27 IST
<div class="paragraphs"><p>ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕಾರಣ ಪಕ್ಷದ ಮುಖಂಡರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಮುಂಬೈನಲ್ಲಿ ಶುಕ್ರವಾರ ಸಿಹಿ ತಿನ್ನಿಸಿ ಸಂಭ್ರಮಿಸಿದರು&nbsp;  </p></div>

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕಾರಣ ಪಕ್ಷದ ಮುಖಂಡರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಮುಂಬೈನಲ್ಲಿ ಶುಕ್ರವಾರ ಸಿಹಿ ತಿನ್ನಿಸಿ ಸಂಭ್ರಮಿಸಿದರು 

   

ಪಿಟಿಐ ಚಿತ್ರ 

ಮುಂಬೈ: ದೇಶದ ಗಮನ ಸೆಳೆದಿದ್ದ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ, ಅವಿಭಜಿತ ಶಿವಸೇನಾ ಈ ಪಾಲಿಕೆಯಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಹೊಂದಿದ್ದ ಪ್ರಾಬಲ್ಯವನ್ನು ಛಿದ್ರಗೊಳಿಸಿದೆ.

ADVERTISEMENT

ಬಿಎಂಸಿಯಲ್ಲಿ ತನ್ನ ಮೇಯರ್‌ ಹೊಂದಬೇಕು ಎಂಬ ಬಿಜೆಪಿಯ ದೀರ್ಘಕಾಲದ ಕನಸು ನನಸಾಗುವ ಗಳಿಗೆ ಕೂಡಿಬಂದಂತಾಗಿದೆ. ಇದಕ್ಕೆ ಮಿತ್ರಪಕ್ಷವಾದ ಶಿವಸೇನಾ (ಶಿಂದೆ ಬಣ) ಸಾಥ್‌ ನೀಡಿದೆ. 

ಬಿಎಂಸಿಯ ಒಟ್ಟು ಸದಸ್ಯ ಬಲ 227. ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಒಳಗೊಂಡ ಮೈತ್ರಿಕೂಟವು ಸರಳ ಬಹುಮತ ಪಡೆಯುವತ್ತ ಹೆಜ್ಜೆ ಇಟ್ಟಿದ್ದು, ಈ ಮೂಲಕ ದೇಶದ ಅತ್ಯಂತ ಶ್ರೀಮಂತ ನಗರ ಸ್ಥಳೀಯ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 2025–26ನೇ ಸಾಲಿನ ಬಿಎಂಸಿ ಬಜೆಟ್ ಗಾತ್ರ ₹74,427 ಕೋಟಿ ಆಗಿದೆ. 

ಬಿಎಂಸಿ ಹಾಗೂ ಇತರ 28 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯಿತು. 

ಎನ್‌ಸಿಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ಪುಣೆಯಲ್ಲಿ ಕೂಡ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಚುನಾವಣೆಗೂ ಮುನ್ನ ಎನ್‌ಸಿಪಿಯ ಎರಡೂ ಬಣಗಳು (ಅಜಿತ್‌ ಪವಾರ್‌ ಹಾಗೂ ಶರದ್ ಪವಾರ್‌ ಬಣ) ಮೈತ್ರಿ ಮಾಡಿಕೊಂಡಿದ್ದವು. ಆ ಮೈತ್ರಿಯನ್ನೂ ಮಣಿಸುವ ಮೂಲಕ ಕೇಸರಿ ‍ಪಕ್ಷ ವಿಜಯದ ನಗೆ ಬೀರಿದೆ.

ಬಿಎಂಸಿ: ಬಿಎಂಸಿ ಚುನಾವಣೆಗಾಗಿ ಎರಡು ದಶಕಗಳ ವೈಮನಸ್ಸು ಮರೆತು ಶಿವಸೇನಾ (ಯುಬಿಟಿ) ನಾಯಕ ಉದ್ಧವ್‌ ಠಾಕ್ರೆ ಹಾಗೂ ಎಂಎನ್‌ಎಸ್‌ನ ರಾಜ್‌ ಠಾಕ್ರೆ ಒಂದಾಗಿದ್ದರು. ಆದರೂ, ಅವರ ಒಗ್ಗಟ್ಟು ನಿರೀಕ್ಷಿತ ಫಲ ನೀಡಲಿಲ್ಲ.

ಬಿಎಂಸಿಯು ಠಾಕ್ರೆ ನೇತೃತ್ವದ ಶಿವಸೇನಾದ ಅಭೇದ್ಯ ಕೋಟೆಯಂದೇ ಪರಿಗಣಿತವಾಗಿತ್ತು. ಈಗ ಈ ಚುನಾವಣೆಯು ಮುಂಬೈ ಮಹಾನಗರದ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಆಗಿರುವ ಮಹತ್ತರ ಸ್ಥಿತ್ಯಂತರವನ್ನು ತೋರಿಸಿಕೊಟ್ಟಿದೆ.

ಮುಂಬೈ ರಾಜಕಾರಣವು ಸಾಂಪ್ರದಾಯಿಕವಾದ ‘ಮರಾಠಿ ಅಸ್ಮಿತೆ’ ಆಧರಿಸಿದ್ದು ಎಂಬ ಸಂಕಥನದಿಂದ, ಬಿಜೆಪಿ ಪ್ರತಿಪಾದಿಸುವ ‘ಅಭಿವೃದ್ಧಿ ಮತ್ತು ನಗರ ಮೂಲಸೌಕರ್ಯ’ ಘೋಷಣೆಯತ್ತ ವಾಲಿದೆ ಎಂಬುದನ್ನು ಆ ಪಕ್ಷಕ್ಕೆ ದೊರೆತ ಅಭೂತಪೂರ್ವ ಗೆಲುವು ಸಾರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪುಣೆ ಹಾಗೂ ಪಿಸಿಎಂಸಿ: ‘ಹೈವೋಲ್ಟೇಜ್‌’ ಹಣಾಹಣಿಯಿಂದಾಗಿ ಪುಣೆ ಮಹಾನಗರ ಪಾಲಿಕೆ ಹಾಗೂ ಪಿಂಪ್ರಿ–ಚಿಂಚವಾಡ್‌ ಮಹಾನಗರ ಪಾಲಿಕೆ(ಪಿಸಿಎಂಸಿ) ಕೂಡ ಗಮನ ಸೆಳೆದಿದ್ದವು.

ಈ ಪಾಲಿಕೆಗಳು ಎನ್‌ಸಿಪಿಯ ಭದ್ರಕೋಟೆಗಳಾಗಿದ್ದವು. ಇಲ್ಲಿ ಕೂಡ, ಎನ್‌ಸಿಪಿಯ ಅಜಿತ್‌ ಪವಾರ್‌ ಹಾಗೂ ಶರದ್‌ ಪವಾರ್ ಬಣಗಳು ಒಂದಾಗಿ ಚುನಾವಣೆ ಎದುರಿಸಿದ್ದವು. ಈ ಎರಡೂ ಪಾಲಿಕೆಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ‘ತಂತ್ರಗಾರಿಕೆ’ ಫಲ ನೀಡಿದ್ದು, ಮಹಾಯುತಿ ಜಯಭೇರಿ ಬಾರಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ತವರು, ನಾಗ್ಪುರ ಮಹಾನಗರ ಪಾಲಿಕೆಯಲ್ಲಿ ಕೂಡ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ದೊಡ್ಡ ಪ್ರಚಾರದ ಹೊರತಾಗಿಯೂ ಕಾಂಗ್ರೆಸ್‌ ಪಕ್ಷ ಇಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ವಿಫಲವಾಗಿದೆ.

ಭಿವಂಡಿ, ಕೊಲ್ಹಾಪುರ ಹಾಗೂ ಚಂದ್ರಾಪುರ ಪಾಲಿಕೆಗಳಲ್ಲಿ ಕಾಂಗ್ರೆಸ್ ಹಾಗೂ ಮಾಲೆಗಾಂವ್‌ನಲ್ಲಿ ಎಐಎಂಐಎಂ ಮುನ್ನಡೆ ಸಾಧಿಸಿದೆ.

ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ವಂಚಿತ ಬಹುಜನ ಅಘಾಡಿ (ಬಿವಿಎ) ಅಭ್ಯರ್ಥಿಗಳು ನಾಂದೇಡ, ಲಾತೂರ್‌ ಹಾಗೂ ಅಕೋಲಾದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ, ರಾಜ್ಯದ ಮರಾಠವಾಡ ಮತ್ತು ವಿದರ್ಭ ಭಾಗದಲ್ಲಿ ತನಗಿರುವ ಶಕ್ತಿಯ ಪ್ರದರ್ಶನವನ್ನು ಬಿವಿಎ ಮಾಡಿದೆ.

ಬಿಎಂಸಿ ಸೇರಿ ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಜನವರಿ 15ರಂದು ಚುನಾವಣೆ ನಡೆದಿತ್ತು. ಈ ಪೈಕಿ 9 ಪಾಲಿಕೆಗಳು ಮುಂಬೈ ಮೆಟ್ರೊಪಾಲಿಟನ್ ಪ್ರದೇಶ (ಎಂಎಂಆರ್‌) ವ್ಯಾಪ್ತಿಯಲ್ಲಿಯೇ ಇವೆ. ಇವುಗಳಲ್ಲಿ ಬಹುತೇಕ ಪಾಲಿಕೆಗಳ ಅವಧಿಯು 2020ರಿಂದ 2023ರ ನಡುವೆಯೇ ಅಂತ್ಯಗೊಂಡಿತ್ತು.

ಧನ್ಯವಾದ ಮಹಾರಾಷ್ಟ್ರ: ನರೇಂದ್ರ ಮೋದಿ

ಉತ್ತಮ ಆಡಳಿತದ ಎನ್‌ಡಿಎ ಕಾರ್ಯಸೂಚಿಯನ್ನು ರಾಜ್ಯದ ಕ್ರಿಯಾಶೀಲ ಜನರು ಆಶೀರ್ವದಿಸಿದ್ದಾರೆ. ವಿವಿಧ ಪಾಲಿಕೆಗಳ ಚುನಾವಣಾ ಫಲಿತಾಂಶದಿಂದ ಎನ್‌ಡಿಎ ಜೊತೆಗೆ ಮಹಾರಾಷ್ಟ್ರದ ಜನರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಇಡೀ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ ನರೇಂದ್ರ ಮೋದಿ ಪ್ರಧಾನಿ ರಾಜ್ಯದ 29 ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಮಾಣಿಕತೆ ಅಭಿವೃದ್ಧಿಯನ್ನು ಬಯಸಿ ಬಿಜೆಪಿ ನೇತೃತ್ವದ ಮಹಾಯುತಿಗೆ ಜನರು ಮತ ನೀಡಿದ್ದಾರೆ. ಬಿಜೆಪಿಯ ಅಭಿವೃದ್ಧಿಯ ಕಾರ್ಯಸೂಚಿಯನ್ನು ಜನರ ಮುಂದಿಟ್ಟಿದ್ದೆವು ಇದಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ದೇವೇಂದ್ರ ಫಡಣವೀಸ್‌ ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿ ಹಾಗೂ ಶಿವಸೇನಾ ನಂಬಿರುವ ಹಿಂದುತ್ವಕ್ಕೆ ಸ್ಪಷ್ಟ ಜನಾಭಿಪ್ರಾಯ ದೊರೆತಿರುವುದನ್ನು ಬಿಎಂಸಿ ಚುನಾವಣೆ ಫಲಿತಾಂಶ ತೋರಿಸಿದೆ. ಹಿಂದೂಗಳ ಹಿತಾಸಕ್ತಿ ರಕ್ಷಣೆಗೆ ಯಾರು ಮುಂದಾಗುವರೋ ಅವರೇ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುವರು ನಿತೇಶ್‌ ರಾಣೆ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ (‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.