ADVERTISEMENT

ಮುಂಬೈ: ನದಿಯಲ್ಲಿ ಮಗುಚಿದ ದೋಣಿ 11 ಸಾವು? ನಾಲ್ವರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 13:05 IST
Last Updated 14 ಸೆಪ್ಟೆಂಬರ್ 2021, 13:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ವಾರ್ಧಾ ನದಿಯಲ್ಲಿ ದೋಣಿಯೊಂದು ಮಗುಚಿದ್ದು, ಒಟ್ಟು 11 ಜನರು ಮೃತಪಟ್ಟಿರುವ ಶಂಕೆ ಇದೆ. ನಾಲ್ವರ ಶವ ಪತ್ತೆಯಾಗಿದೆ.

ಶ್ರೀಕ್ಷೇತ್ರ ಜುಂಜ್‌ ಬಳಿ ನದಿಯ ಇನ್ನೊಂದು ಮಗ್ಗುಲಲ್ಲಿರುವ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ದೋಣಿ ಮುಗುಚಿದೆ. ಬೆನೋದಾ ಶಾಹೀದ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ 10ಕ್ಕೆ ಅವಘಡ ಸಂಭವಿಸಿದೆ.

ದೋಣಿಯಲ್ಲಿದ್ದ ಕ್ರಮವಾಗಿ 27 ಮತ್ತು 35 ವರ್ಷದ ಇಬ್ಬರು ಈಜಿ ದಡ ಸೇರಿದ್ದಾರೆ. ಮೀನುಗಾರರ ನೆರವು ಪಡೆದು ನಾಪತ್ತೆ ಆದ 7 ಮಂದಿ ಪತ್ತೆಗೆ ಶೋಧ ನಡೆದಿದೆ. ಅವರು ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಾರ್ಧಾ ಭಾಗದಲ್ಲಿ ಕಳೆದ ಮೂರು ದಿನದಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ನತದೃಷ್ಟರು ಗಡೆಗಾಂವ್‌ ನಿವಾಸಿಗಳು. ಸಾಮರ್ಥ್ಯ ಮೀರಿ ದೋಣಿ ಏರಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ.

ವಾರುದ್ ತಾಲ್ಲೂಕು ವ್ಯಾಪ್ತಿಯ ಜುಂಜ್‌ಗೆ, ಈಚೆಗೆ ಮೃತಪಟ್ಟಿದ್ದ ಸಂಬಂಧಿಕರ ಅಂತಿಮ ವಿಧಿ ನಡೆಸಲು ತೆರಳಿದ್ದರು. ಜಲಪಾತವನ್ನು ವೀಕ್ಷಿಸಿದ ಬಳಿಕ ದೇಗುಲಕ್ಕೆ ನದಿಯ ಇನ್ನೊಂದು ಮಗ್ಗುಲಲ್ಲಿದ್ದ ದೋಣಿಯಲ್ಲಿ ಹೋಗುವಾಗ ಮಗುಚಿದೆ.

ವಾರುದ್ ಉಪ ವಿಭಾಗಾಧಿಕಾರಿ ನಿತಿನ್‌ ಹಿಂಗೋಲೆ ಅವರು ಶೋಧ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.