ADVERTISEMENT

ರಫೇಲ್‌ ಒಪ್ಪಂದ ಅತಿ ದೊಡ್ಡ ರಕ್ಷಣಾ ಹಗರಣ: ಅರುಣ್ ಶೌರಿ, ಯಶವಂತ್ ಸಿನ್ಹಾ ಆರೋಪ

ಏಜೆನ್ಸೀಸ್
Published 9 ಆಗಸ್ಟ್ 2018, 5:20 IST
Last Updated 9 ಆಗಸ್ಟ್ 2018, 5:20 IST
ಅರುಣ್ ಶೌರಿ (ಎಡ ಚಿತ್ರ) ಮತ್ತು ಯಶವಂತ್ ಸಿನ್ಹಾ (ಸಂಗ್ರಹ ಚಿತ್ರಗಳು)
ಅರುಣ್ ಶೌರಿ (ಎಡ ಚಿತ್ರ) ಮತ್ತು ಯಶವಂತ್ ಸಿನ್ಹಾ (ಸಂಗ್ರಹ ಚಿತ್ರಗಳು)   

ನವದೆಹಲಿ: ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂವರೂ ನಾಯಕರು, ‘ಈವರೆಗೆ ನಡೆದಿರದಂತಹ ಅತಿ ದೊಡ್ಡ ಹಗರಣವಾಗಿದೆ ರಫೇಲ್‌. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ. ಅಪರಾಧದ ದುರ್ವರ್ತನೆಗೆ ಈ ಹಗರಣ ಆದರ್ಶ ಉದಾಹರಣೆಯಂತಿದೆ’ ಎಂದು ಹೇಳಿದ್ದಾರೆ.

ಈ ಹಗರಣ ಬೋಫೋರ್ಸ್‌ಗಿಂತಲೂ ದೊಡ್ಡದು ಎಂದಿರುವ ಅರುಣ್ ಶೌರಿ, ಈ ಬಗ್ಗೆ ಮಹಾಲೇಖಪಾಲರಿಂದ ಲೆಕ್ಕಪರಿಶೋಧನೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ವಿಮಾನದ ತಾಂತ್ರಿಕ ಮತ್ತು ಕಾರ್ಯಾಚರಣೆ ಸಾಮರ್ಥ್ಯವನ್ನಷ್ಟೇ ಬಹಿರಂಗಪಡಿಸಬಾರದು ಎಂಬುದು ಫ್ರಾನ್ಸ್‌ ಜತೆಗಿನ ಒಪ್ಪಂದದಲ್ಲಿರುವ ಅಂಶ. ವಿಮಾನದ ದರದ ಮಾಹಿತಿ ಬಹಿರಂಗಪಡಿಸಬಾರದು ಎಂಬುದಿಲ್ಲ ಎಂದು ಶೌರಿ ಹೇಳಿದರು.

2017ರ ಫೆಬ್ರುವರಿ 17ರಂದು ಫ್ರಾನ್ಸ್‌ನ ‘ಡಸಾಲ್ಟ್ ಏವಿಯೇಷನ್’ ಕಂಪೆನಿ ಮತ್ತು ‘ರಿಲಾಯನ್ಸ್ ಡಿಫೆನ್ಸ್’ ಬಿಡುಗಡೆ ಮಾಡಿರುವ ಪ್ರಕಟಣೆ ಉಲ್ಲೇಖಿಸಿದ ಶೌರಿ, ಸಿನ್ಹಾ, ‘ಒಂದು ರಫೇಲ್ ವಿಮಾನಕ್ಕೆ ₹1,660 ಕೋಟಿಯಂತೆ 36 ವಿಮಾನಗಳ ಒಟ್ಟು ಮೊತ್ತ ಸುಮಾರು ₹60 ಸಾವಿರ ಕೋಟಿ’ ಎಂದು ಹೇಳಲಾಗಿದೆ. ಈ ದರ ಮೂಲ ‘126 ಮೀಡಿಯಂ ಮಲ್ಟಿ ರೋಲ್ ಯುದ್ಧ ವಿಮಾನ’ದ ದರಕ್ಕಿಂತ ದ್ವಿಗುಣವಾಗಿದೆ. ಸರ್ಕಾರವೇ ನಿಗದಿಪಡಿಸಿದ (2016ರ ನವೆಂಬರ್‌ನಲ್ಲಿ ಸಂಸತ್‌ಗೆ ತಿಳಿಸಿರುವಂತೆ) ದರಕ್ಕಿಂತ ₹1,000 ಕೋಟಿ ಹೆಚ್ಚಿನದ್ದಾಗಿದೆ.

ಬೋಫೋರ್ಸ್‌ ವಿರುದ್ಧ ಬಿಜೆಪಿ ಧ್ವನಿಯೆತ್ತಿದ್ದ ಮಾದರಿಯಲ್ಲೇ ಈಗ ಪ್ರತಿಪಕ್ಷಗಳು ರಫೇಲ್‌ ವಿರುದ್ಧ ದನಿಯೆತ್ತಬೇಕು ಎಂದೂ ಶೌರಿ ಆಗ್ರಹಿಸಿದರು.

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿ ವಿಷಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಪ್ಪು ಮಾಹಿತಿ ನೀಡಿದ್ದು, ದೇಶಕ್ಕೇ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಲೋಕಸಭೆಯಲ್ಲಿ ಆರೋಪಿಸಿದ್ದರು.

ಈ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ ಸ್ಪಷ್ಟನೆ ಹೊರಡಿಸಿತ್ತು. ಒಪ್ಪಂದದ ಸೂಕ್ಷ್ಮ ಅಂಶಗಳನ್ನು ಬಹಿರಂಗಪಡಿಸದಿರಲು ಎರಡು ರಾಷ್ಟ್ರಗಳೂ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ಹೇಳಿತ್ತು. ಆದರೆ, ವಿಮಾನದ ಬೆಲೆಯ ಮಾಹಿತಿ ‘ಒಪ್ಪಂದದ ಸೂಕ್ಷ್ಮ ಅಂಶಗಳ’ ಅಡಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಫ್ರಾನ್ಸ್ ಸ್ಪಷ್ಟಪಡಿಸಿಲ್ಲ.

ಇನ್ನಷ್ಟು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.