ADVERTISEMENT

ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತು: ಅತ್ಯಾಚಾರ ಆರೋಪಿಗೆ ಜಾಮೀನು

ಪಿಟಿಐ
Published 17 ಅಕ್ಟೋಬರ್ 2022, 13:32 IST
Last Updated 17 ಅಕ್ಟೋಬರ್ 2022, 13:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನಿಗೆ ಜಾಮೀನು ಮಂಜೂರು ಮಾಡಿರುವ ಬಾಂಬೆ ಹೈಕೋರ್ಟ್‌, ಒಂದು ವರ್ಷದೊಳಗೆ ಸಂತ್ರಸ್ತೆಯನ್ನು ಪತ್ತೆ ಹಚ್ಚಿದರೆ ಆಕೆಯನ್ನು ಮದುವೆಯಾಗಬೇಕೆಂಬ ಷರತ್ತನ್ನು ಮುಂದಿರಿಸಿದೆ.

ನ್ಯಾಯಮೂರ್ತಿ ಭಾರತಿ ದಾಂಗ್ರೆ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಸಂತ್ರಸ್ತೆಯು ಈಗ ಎಲ್ಲಿದ್ದಾಳೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

26 ವರ್ಷ ವಯಸ್ಸಿನ ಆರೋಪಿ ಹಾಗೂ 22 ವರ್ಷ ವಯಸ್ಸಿನ ಯುವತಿಯ ನಡುವೆ ಒಪ್ಪಿತ ಸಂಬಂಧವಿತ್ತು. ಯುವತಿ ಗರ್ಭಿಣಿಯಾದಾಗ ಆರೋಪಿಯು ಆಕೆಯಿಂದ ದೂರವಾಗಲು ಯತ್ನಿಸಿದ್ದ. ಈ ಕಾರಣಕ್ಕೆ ಆಕೆ ನೀಡಿದ ದೂರಿನಂತೆ ಆತನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ತಾನು ಗರ್ಭಿಣಿ ಎಂಬ ವಿಚಾರವನ್ನು ಮನೆಯವರಿಗೆ ತಿಳಿಸಲು ಇಷ್ಟ ಪಡದ ಯುವತಿ ಅವರಿಂದ ದೂರವಿದ್ದು, 2020 ಜನವರಿ 27 ರಂದು ಮುಂಬೈನ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಜನವರಿ 30 ರಂದು ಆಕೆ ತನ್ನ ಮಗುವನ್ನು ಕಟ್ಟಡವೊಂದರ ಮುಂದೆ ತೊರೆದು ಹೋಗಿದ್ದಳು. ಈ ಸಂಬಂಧ ಆಕೆಯ ವಿರುದ್ಧವೂ ಎಫ್‌ಐಆರ್‌ ದಾಖಲಾಗಿತ್ತು.

ಯುವತಿಯನ್ನು ಮದುವೆಯಾಗಲು ಸಿದ್ಧನೆಂದು ಆರೋಪಿಯು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಶಿಶು ಪಾಲನಾ ಕೇಂದ್ರಕ್ಕೆ ದಾಖಲಿಸಿದ್ದ ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.