ADVERTISEMENT

ಚಂದಾ ಕೊಚ್ಚರ್, ದೀಪಕ್ ಬಂಧನ ಕಾನೂನಾತ್ಮಕವಲ್ಲ: ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2023, 6:07 IST
Last Updated 9 ಜನವರಿ 2023, 6:07 IST
   

ಮುಂಬೈ: ಸಿಬಿಐನಿಂದ ಬಂಧನಕ್ಕೊಳಗಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್‌ ಮತ್ತು ಅವರ ಗಂಡ ದೀಪಕ್‌ ಕೊಚ್ಚರ್‌ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಬಂಧನವು ಕಾನೂನಿನ ಪ್ರಕಾರವಾಗಿಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41ಎ ಅನ್ನು ಉಲ್ಲಂಘಿಸಲಾಗಿದೆ. ಸಂಬಂಧ ಪಟ್ಟ ವ್ಯಕ್ತಿಗೆ ಮೊದಲು ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಲು ಹೇಳಬೇಕು ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ಪಿಕೆ ಚವಾಣ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ನಿರ್ದೇಶಕಿ ಚಂದಾ ಕೊಚ್ಚರ್‌, ದೀಪಕ್‌ ಕೊಚ್ಚರ್‌ ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಮತ್ತು ವಂಚನೆ ಆರೋಪವಿದೆ.

ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಮತ್ತು ವಿಡಿಯೊಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ADVERTISEMENT

ವಿಡಿಯೊಕಾನ್ ಗ್ರೂಪ್, ಐಸಿಐಸಿಐ ಬ್ಯಾಂಕ್‌ನಿಂದ ₹ 3,250 ಕೋಟಿ ಸಾಲ ಪಡೆದ ಕೆಲ ತಿಂಗಳ ನಂತರ ವಿಡಿಯೊಕಾನ್ ಪ್ರವರ್ತಕ ವೇಣುಗೋಪಾಲ್, ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು.

ಆರೋಪಿಯು(ಚಂದಾ ಕೊಚ್ಚರ್) ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿಗೆ ಸಾಲವನ್ನು ಮಂಜೂರು ಮಾಡಿದ್ದಾರೆ ಎಂಬುದು ಸಿಬಿಐ ಆರೋಪವಾಗಿದೆ.

ಪ್ರಕರಣ ಕುರಿತಂತೆ 2019ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.