ADVERTISEMENT

ಗೋವಾದಲ್ಲಿ ಕನ್ನಡ ಭವನ ನಿರ್ಮಾಣ: ಭಾರಿ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 14:25 IST
Last Updated 30 ಸೆಪ್ಟೆಂಬರ್ 2022, 14:25 IST
   

ಪಣಜಿ: ಗೋವಾದಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಒಂದರಿಂದ ಎರಡು ಎಕರೆ ಜಾಗ ಮಂಜೂರು ಮಾಡುವಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ಕೆಲವು ದಿನಗಳ ಹಿಂದೆ ಪತ್ರ ಬರೆದಿದ್ದರು. ಗೋವಾದಲ್ಲಿ ಈ ಕುರಿತು ಪರ–ವಿರೋಧದ ಚರ್ಚೆ ಪ್ರಾರಂಭವಾಗಿದೆ.

ಗೋವಾದಲ್ಲಿನ ವಿರೋಧ ಪಕ್ಷಗಳು, ಕೆಲವು ನಾಗರಿಕ ಸಂಘಟನೆಗಳು ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡಬಾರದು ಎಂದು ಒತ್ತಾಯ ಮಾಡಿವೆ. ಕನ್ನಡಿಗರು ಹೆಚ್ಚಿರುವ ವಾಸ್ಕೊ ಕ್ಷೇತ್ರದ ಶಾಸಕ ಸೇರಿದಂತೆ ಕೆಲವು ಬಿಜೆಪಿ ಶಾಸಕರು ಭವನ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು ಎನ್ನುತ್ತಿದ್ದಾರೆ.

‘ಕನ್ನಡ ಹಾಗೂ ಕನ್ನಡ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಾ ಗೋವಾದ ಅಸ್ಮಿತೆಯ ಮೇಲೆ ಅವರು (ಕರ್ನಾಟಕ) ದಾಳಿ ನಡೆಸುತ್ತಿದ್ದಾರೆ’ ಎಂದು ಗೋವಾದ ಪ್ರಾದೇಶಿಕ ಪಕ್ಷ ರೆವೆಲೂಷನರಿ ಗೋವನ್ಸ್‌ ಪಕ್ಷದ (ಆರ್‌ಜಿಪಿ) ಸಂಚಾಲಕ ಮನೋಜ್‌ ಪರಬ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕನ್ನಡಿಗರ ಜನ ಸಂಖ್ಯೆ ಹೆಚ್ಚಿರುವ ವಾಸ್ಕೊ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಾ ಸಾಲ್ಕರ್‌ ಅವರು ಭವನ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಇಲ್ಲಿ ವಾಸಿಸುತ್ತಿರುವ ಕರ್ನಾಟಕಟ ಮೂಲದವರನ್ನು ಕನ್ನಡಿಗರು ಎಂದು ಸಂಬೋಧಿಸುವುದನ್ನು ನಿಲ್ಲಿಸಬೇಕು. ಅವರು ಗೋವನ್ನರು. ಯಾಕೆಂದರೆ, ಪೋರ್ಚುಗೀಸರ ಕಾಲದಿಂದ ಅವರು ಗೋವಾದಲ್ಲಿಯೇ ವಾಸವಿದ್ದಾರೆ’ ಎಂದು ಕೆಲವು ದಿನಗಳ ಹಿಂದೆ ಕೃಷ್ಣಾ ಅವರು ಹೇಳಿದ್ದರು.

ಬೊಮ್ಮಾಯಿ ಅವರು ತಮ್ಮ ಹಿಂದಿನ ಬಜೆಟ್‌ನಲ್ಲಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ₹10 ಕೋಟಿ ಮೀಸಲಿಟ್ಟಿದ್ದರು. ಮಂಗಳೂರಿನಲ್ಲಿ ಕೊಂಕಣಿ ಭವನ ನಿರ್ಮಾಣಕ್ಕಾಗಿ ₹ 3 ಕೋಟಿ ಮೀಸಲಿಡಲಾಗಿದೆ ಎಂದು ಬೊಮ್ಮಾಯಿ ಅವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.