ADVERTISEMENT

ಭಾಗವತ್‌ ಹೇಳಿಕೆಗೆ ಬ್ರಾಹ್ಮಣರ ಖಂಡನೆ; ಹಾನಿ ತಡೆಯಲು ಮುಂದಾದ ಬಿಜೆಪಿ

ಉತ್ತರ ಪ್ರದೇಶ: ಚುನಾವಣೆ ಹೊಸ್ತಿಲಲ್ಲಿ ಕೇಸರಿ ಪಕ್ಷಕ್ಕೆ ಇರುಸುಮುರುಸು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 15:27 IST
Last Updated 7 ಫೆಬ್ರುವರಿ 2023, 15:27 IST
ಮೋಹನ್‌ ಭಾಗವತ್
ಮೋಹನ್‌ ಭಾಗವತ್   

ಲಖನೌ: ಜಾತಿ ಪದ್ಧತಿ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಅವರ ಹೇಳಿಕೆಯನ್ನು ಉತ್ತರ ಪ್ರದೇಶದಲ್ಲಿರುವ ಬ್ರಾಹ್ಮಣ ಸಂಘಟನೆಗಳು ಖಂಡಿಸಿದ್ದು, ಭಾಗವತ್‌ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿವೆ.

ಇನ್ನೊಂದೆಡೆ, ಭಾಗವತ್ ಹೇಳಿಕೆಯಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ. ‘ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ವಿರೋಧ ಪಕ್ಷಗಳು ಭಾಗವತ್‌ ಅವರ ಹೇಳಿಕೆಯನ್ನು ತಿರುಚಿವೆ’ ಎಂದು ಬಿಜೆಪಿ ಹೇಳಿದೆ.

ಮುಂಬೈನಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್‌, ‘ದೇವರ ಮುಂದೆ ಎಲ್ಲರೂ ಸಮಾನರು. ಜಾತಿ, ವರ್ಗಗಳು ಇರಲಿಲ್ಲ. ಇವುಗಳನ್ನು ಪಂಡಿತರು ಸೃಷ್ಟಿಸಿದರು’ ಎಂದು ಹೇಳಿದ್ದರು. ಇದು ಈಗ ಉತ್ತರ ಪ್ರದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಉತ್ತರ ಪ್ರದೇಶದ ಒಟ್ಟು ಮತದಾರರಲ್ಲಿ ಬ್ರಾಹ್ಮಣರ ಪ್ರಮಾಣ ಶೇ 12ರಷ್ಟಿದೆ. ಇಲ್ಲಿ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಈಗ ಭಾಗವತ್‌ ಅವರ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂಬರುವ ಚುನಾವಣೆ ಮೇಲೆ ಆಗಬಹುದಾದ ಪರಿಣಾಮವನ್ನು ತಡೆಯಲು ಪಕ್ಷದ ಮುಖಂಡರು ಯತ್ನಿಸುತ್ತಿದ್ದಾರೆ.

‘ಭಾಗವತ್‌ ಅವರು ತಮ್ಮ ಭಾಷಣದಲ್ಲಿ ಪಂಡಿತ್ ಎಂಬ ಪದ ಬಳಸಿದ್ದಾರೆ. ಅವರು ಎಲ್ಲಿಯೂ ಬ್ರಾಹ್ಮಣರ ಬಗ್ಗೆ ಪ್ರಸ್ತಾಪಿಸಿಲ್ಲ. ಪಂಡಿತ ಎಂಬ ಪದ ಜ್ಞಾನವುಳ್ಳ ವ್ಯಕ್ತಿ ಎಂದಾಗುತ್ತದೆ ಹೊರತು ಅದು ಬ್ರಾಹ್ಮಣ ಸಮುದಾಯವನ್ನು ಸೂಚಿಸುವುದಿಲ್ಲ’ ಎಂದು ಬಿಜೆಪಿಯ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಸುಬ್ರತ ಪಾಠಕ್‌ ಹೇಳಿದ್ದಾರೆ.

‘ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿಯೇ ಈ ವಿಷಯವನ್ನು ತಿರುಚುತ್ತಿವೆ. ವಿರೋಧ ಪಕ್ಷಗಳ ಈ ಕುತಂತ್ರಕ್ಕೆ ಬ್ರಾಹ್ಮಣ ಸಮುದಾಯ ಬಲಿಯಾಗುವುದಿಲ್ಲ’ ಎಂದಿದ್ದಾರೆ.

ವಿರೋಧ ಪಕ್ಷಗಳಲ್ಲಿರುವ ಬ್ರಾಹ್ಮಣ ಮುಖಂಡರು ಕೂಡ ಭಾಗವತ್‌ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಭಾಗವತ್‌ ಅವರ ಹೇಳಿಕೆಯು ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಸಮಾಜವಾದಿ ಪಕ್ಷದ ಬ್ರಾಹ್ಮಣ ಮುಖಂಡರೊಬ್ಬರು ಹೇಳಿದ್ದಾರೆ.

‘ರಾಮಚರಿತ ಮಾನಸ’ ಕೃತಿಯು ದಲಿತ ವಿರೋಧಿ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿರುವ ಎಸ್‌ಪಿ ಮುಖಂಡ ಸ್ವಾಮಿ ಪ್ರಸಾದ್‌ ಮೌರ್ಯ ಅವರಿಗೆ ಜಾತಿ ಪದ್ಧತಿ ಕುರಿತ ಭಾಗವತ್‌ ಅವರ ಈ ಹೇಳಿಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

‘ಭಾಗವತ್‌ ಹೇಳಿಕೆಯು ಆ ಕೃತಿಯ (ರಾಮಚರಿತ ಮಾನಸ) ಬಗ್ಗೆ ನನ್ನ ಮಾತು ನಿಜ ಎಂದು ಹೇಳಿದಂತಿದೆ. ನನ್ನ ವಿರುದ್ಧ ಪ್ರತಿಭಟಿಸಿದವರು ಈಗ ಭಾಗವತ್‌ ವಿರುದ್ಧವೂ ಪ್ರತಿಭಟಿಸಬೇಕು’ ಎಂದು ಮೌರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.