ADVERTISEMENT

ಕಾರ್ಬಿನ್‌ ಜತೆ ಬ್ರಿಟನ್‌ ಕಾಂಗ್ರೆಸ್‌ ನಿಯೋಗ ಭೇಟಿ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:15 IST
Last Updated 10 ಅಕ್ಟೋಬರ್ 2019, 20:15 IST
ಕಾಂಗ್ರೆಸ್‌ ನಿಯೋಗ
ಕಾಂಗ್ರೆಸ್‌ ನಿಯೋಗ   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಬ್ರಿಟನ್‌ನ ಸಾಗರೋತ್ತರ ಘಟಕದ (ಐಒಸಿ) ನಿಯೋಗವು ಬ್ರಿಟನ್‌ನ ಲೇಬರ್‌ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್‌ ಜತೆ ನಡೆಸಿದ ಮಾತುಕತೆಯು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ನಿಯೋಗದ ಜತೆಗೆ ಚರ್ಚಿಸಿದ್ದಾಗಿ ಕಾರ್ಬಿನ್‌ ಮಾಡಿದ ಟ್ವೀಟ್‌ ಅನ್ನು ಬಳಸಿಕೊಂಡು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಈ ನಿಯೋಗವು ವಿದೇಶದಲ್ಲಿ ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಮಾಡಿದೆ ಎಂದು ಆರೋಪಿಸಿದೆ.

‘ಬ್ರಿಟನ್‌ನ ಲೇಬರ್‌ ಪಕ್ಷದ ನಾಯಕನಿಂದ ಕಾಂಗ್ರೆಸ್‌ ಪಕ್ಷವು ಸಲಹೆ ಪಡೆಯುತ್ತಿರುವ ಪರಿ ಇದು. ಈಗ ಅವರು ಪಾಕಿಸ್ತಾನದಲ್ಲಿರುವ ತಮ್ಮ ಮಾಲೀಕರ ಬಳಿಗೆ ನೇರವಾಗಿಯೇ ಹೋಗಬಹುದು’ ಎಂದು ಬಿಜೆಪಿಯ ವಿದೇಶಾಂಗ ವಿಭಾಗದ ಉಸ್ತುವಾರಿ ವಿಜಯ್‌ ಚೌತಾಯ್‌ವಾಲ ಟೀಕಿಸಿದ್ದಾರೆ.

ADVERTISEMENT

ಕಾರ್ಬಿನ್‌ ಮಾಡಿರುವ ಟ್ವೀಟ್‌ ಅನ್ನು ಕಾಂಗ್ರೆಸ್‌ನ ಸಾಗರೋತ್ತರ ಘಟಕವು ತಿರಸ್ಕರಿಸಿದೆ. ‘ಭಯೋತ್ಪಾದನೆ ಮತ್ತು ಭಯೋತ್ಪಾದನಾ ಗುಂ‍ಪುಗಳಿಗೆ ಸಂಬಂಧಿಸಿದ ವಿಚಾರವನ್ನು ಪಾಕಿಸ್ತಾನದ ಜತೆಗೆ ಲೇಬರ್ ಪಕ್ಷ ಚರ್ಚಿಸಬೇಕು. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡಬಾರದು’ ಎಂದು ಕಾರ್ಬಿನ್‌ ಜತೆಗಿನ ಮಾತುಕತೆ ವೇಳೆ ಹೇಳಿದ್ದಾಗಿ ಟ್ವೀಟ್‌ ಮಾಡಿದೆ.

ಭಾರತದ ಆಂತರಿಕ ನೀತಿಯ ಬಗ್ಗೆ ಮಾತನಾಡುವ ಅಧಿಕಾರ ಐಒಸಿಗೆ ಇಲ್ಲ. ಬ್ರಿಟನ್‌ನಲ್ಲಿರುವ ಭಾರತ ಮೂಲದ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ಐಒಸಿ ಸೀಮಿತ ಎಂದು ಕಾಂಗ್ರೆಸ್‌ನ ಮುಖಂಡ ಆನಂದ್‌ ಶರ್ಮಾ ಹೇಳಿದ್ದಾರೆ. ಕಾಶ್ಮೀರ ವಿವಾದವು ಅಂತರರಾಷ್ಟ್ರೀಯಗೊಳ್ಳಬೇಕು ಎಂಬ ನಿರ್ಣಯವನ್ನು ಲೇಬರ್‌ ಪಕ್ಷ ಈಚೆಗೆ ಕೈಗೊಂಡಿತ್ತು.

***

ಕಾಂಗ್ರೆಸ್‌ನ ಬ್ರಿಟನ್‌ ವಿಭಾಗದ ಪ್ರತಿನಿಧಿಗಳ ಜತೆಗಿನ ಮಾತುಕತೆ ಫಲಪ್ರದವಾಗಿತ್ತು. ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ನಿಯೋಗದ ಜತೆಗೆ ಚರ್ಚಿಸಿದ್ದೇನೆ

–ಜೆರೆಮಿ ಕಾರ್ಬಿನ್‌, ಲೇಬರ್ ಪಕ್ಷದ ನಾಯಕ

ವಿದೇಶಿ ನಾಯಕರಿಗೆಭಾರತದ ಬಗ್ಗೆ ಕಾಂಗ್ರೆಸ್‌ನವರು ಏನು ಹೇಳುತ್ತಿದ್ದಾರೆ ಎಂಬ ಬಗ್ಗೆ ದೇಶದ ಜನರಿಗೆ ವಿವರಣೆ ನೀಡಬೇಕು. ಇಂತಹ ನಾಚಿಕೆಗೇಡಿನ ವರ್ತನೆಗೆ ಭಾರತವು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದೆ

–ಬಿಜೆಪಿ

ಕಾಶ್ಮೀರ ವಿಚಾರದಲ್ಲಿಲೇಬರ್‌ ಪಕ್ಷದ ನಿರ್ಣಯವನ್ನು ಖಂಡಿಸುವುದಕ್ಕಾಗಿ ಕಾರ್ಬಿನ್‌ ಅವರನ್ನು ಭೇಟಿ ಮಾಡಲಾಗಿತ್ತು. ಬಾಹ್ಯ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಅವರಿಗೆ ಹೇಳಿದ್ದೇವೆ

–ಕಮಲಪ್ರೀತ್‌ ಧಾಲಿವಾಲ್‌, ಸಾಗರೋತ್ತರ ಕಾಂಗ್ರೆಸ್‌ ಬ್ರಿಟನ್‌ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.