ADVERTISEMENT

ಪಂಜಾಬ್ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಪಿಟಿಐ
Published 30 ಏಪ್ರಿಲ್ 2022, 1:13 IST
Last Updated 30 ಏಪ್ರಿಲ್ 2022, 1:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೃತಸರ: ಪಾಕಿಸ್ತಾನದಿಂದ ಭಾರತದ ಗಡಿಯೊಳಕ್ಕೆ ನುಸುಳುತ್ತಿದ್ದ ಚೀನಾ ನಿರ್ಮಿತ ಡ್ರೋನ್ ಅನ್ನು ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಶುಕ್ರವಾರ ನಸುಕಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.

ಚೀನಾದಲ್ಲಿ ತಯಾರಿಸಿದ ‘ಡಿಜೆಐ ಮ್ಯಾಟ್ರೈಸ್–300’ ಮಾದರಿಯ ಕಪ್ಪುಬಣ್ಣದ ಡ್ರೋನ್‌ ಅಮೃತಸರ ಸಮೀಪದ ಧನೋ ಕಲಾಂ ಗ್ರಾಮದ ಬಳಿ ಹಾರಾಟ ನಡೆಸುವಾಗ, ಯೋಧರು ಹೊಡೆದುರುಳಿಸಿದರು ಎಂದು ಬಿಎಸ್‌ಎಫ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ನಸುಕಿನ 1.15ರ ವೇಳೆಗೆ ಡ್ರೋನ್ ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬಿಎಸ್‌ಎಫ್‌ ಯೋಧರು ಅದನ್ನು ಹೊಡೆದುರುಳಿಸಿದ್ದಾರೆ. ಅಂತಿಮವಾಗಿ ಬೆಳಿಗ್ಗೆ 6.15ರ ವೇಳೆಗೆ ಡ್ರೋನ್ ಪತನವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಂಜಾಬ್ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಭಾರತದೊಳಕ್ಕೆ ನುಸುಳಲು ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಬಾರಿ ವಿಫಲ ಯತ್ನ ನಡೆಸಿವೆ.

2021ರ ಡಿಸೆಂಬರ್ 18ರಂದು ಪಂಜಾಬ್ ಫಿರೋಜ್‌ಪುರ್‌ ವಲಯದ ವಾನ್‌ ಗಡಿಯಲ್ಲಿ ರಾತ್ರಿ 11.10ರ ವೇಳೆಗೆ ಕಪ್ಪುಬಣ್ಣದ ಡ್ರೋನ್‌ ಹಾರಾಟ ನಡೆದಿದ್ದು, ಹೊಡೆದು ಉರುಳಿಸಲಾಗಿತ್ತು. ಗಡಿಬೇಲಿಗೆ 150 ಮೀಟರ್ ದೂರದಲ್ಲಿ ಡ್ರೋನ್ ಹಾರಾಡುತ್ತಿತ್ತು. ಈ ವರ್ಷ ಫೆಬ್ರುವರಿ 9ರಂದು ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನ ಪಂಜ್‌ಗ್ರೇನ್ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್‌ ಅನ್ನು ಹೊಡೆದುರುಳಿಸಲಾಗಿತ್ತು. ಈ ಡ್ರೋನ್ ಮೂಲಕ ಮಾದಕ ದ್ರವ್ಯ ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ನಡೆದಿತ್ತು. ಬಳಿಕ ಮಾರ್ಚ್ 7ರಂದು ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.