ADVERTISEMENT

ಮತ ವಿಭಜಿಸಿದ ಬಿಎಸ್‌ಪಿ, ಎಐಎಂಐಎಂ; ಎಸ್‌ಪಿಗೆ ಮಾಯಾ, ಒವೈಸಿ ತೊಡಕು

ಎಸ್‌ಪಿ ಅಭ್ಯರ್ಥಿಗಳಿಗೆ ಅಲ್ಪ ಮತಗಳ ಅಂತರದಿಂದ ಸೋಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 20:30 IST
Last Updated 13 ಮಾರ್ಚ್ 2022, 20:30 IST
ಮಾಯಾವತಿ, ಒವೈಸಿ
ಮಾಯಾವತಿ, ಒವೈಸಿ   

ಲಖನೌ: ಮಾಯಾವತಿ ನೇತೃತ್ವದ ಬಿಎಸ್‌ಪಿಗೆಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಾಧ್ಯವಾಗಿದೆ. ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು ಖಾತೆ ತೆರೆಯಲು ವಿಫಲವಾಯಿತು. ಆದರೆ ಈ ಎರಡೂ ಪಕ್ಷಗಳು ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ತೀವ್ರ ಪೆಟ್ಟು ನೀಡುವಲ್ಲಿ ಸಫಲವಾದವು.

100 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ 1ಕ್ಕಿಂತ ಕಡಿಮೆ ಮತಗಳನ್ನು ಪಡೆಯಲಷ್ಟೇ ಶಕ್ತವಾದ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಗೆಲುವಿಗೆ ಮುಳುವಾದರು. ಒಬ್ಬ ಅಭ್ಯರ್ಥಿಯನ್ನು ಹೊರತುಪಡಿಸಿ ಪಕ್ಷದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಬಿಜ್ನೋರ್, ನಕುಡ್, ಕುರ್ಸಿ, ಶಾಹ್‌ಗಂಜ್, ಸುಲ್ತಾನ್‌ಪುರ, ಔರಾಯಿ ಮತ್ತು ಮೊರಾದಾಬಾದ್‌ನಂತಹ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. 217ರಿಂದ 1,700 ಮತಗಳ ಅಂತರದಲ್ಲಿ ಎಸ್‌ಪಿ ಅಭ್ಯರ್ಥಿಗಳು ಸೋಲಿನ ಕಹಿ ಉಂಡಿದ್ದಾರೆ.

ADVERTISEMENT

ಕುರ್ಸಿ ವಿಧಾನಸಭಾ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಯು 8,000 ಮತಗಳನ್ನು ಪಡೆದಿದ್ದಾರೆ. ಆದರೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌ಪಿ ಅಭ್ಯರ್ಥಿಯು 217 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಇದೇ ರೀತಿ ಶಾಹ್‌ಗಂಜ್ ಕ್ಷೇತ್ರದಲ್ಲಿ ಒವೈಸಿ ಪಕ್ಷದ ಅಭ್ಯರ್ಥಿಯು ಎಂಟು ಸಾವಿರ ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್‌ಪಿ ಅಭ್ಯರ್ಥಿಯು 468 ಮತಗಳ ಕೊರತೆಯಿಂದ ತಮ್ಮ ಸೋಲೊಪ್ಪಿಕೊಂಡಿದ್ದಾರೆ.

ನಕುಡ್ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಧರಮ್ ಸಿಂಗ್ ಸೈನಿ ಅವರನ್ನು ಬಿಜೆಪಿ ಅಭ್ಯರ್ಥಿಯು ಕೇವಲ 315 ಮತಗಳಿಂದ ಸೋಲಿಸಿದ್ದಾರೆ. ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಐಎಂಐಎಂ ಪಕ್ಷದ ಅಭ್ಯರ್ಥಿ 3,000ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಾಗೆಯೇ ಸುಲ್ತಾನ್‌ಪುರ ಕ್ಷೇತ್ರದ ಎಸ್‌ಪಿ ಅಭ್ಯರ್ಥಿಯು ಸಾವಿರ ಮತಗಳಿಂದ ಸೋತಿದ್ದಾರೆ. ಇಲ್ಲಿ ಸ್ಪರ್ಧಿಸಿದ್ದ ಎಐಎಐಎಂ ಪಕ್ಷದ ಮುಸ್ಲಿಂ ಅಭ್ಯರ್ಥಿ 5,000ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಫಿರೋಜಾಬಾದ್‌ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯು 38,000 ಮತಗಳನ್ನು ಪಡೆದಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿಯು 33,000 ಮತಗಳ ಅಂತರದಿಂದ ಗೆದ್ದರು.ಕಾಂಗ್ರೆಸ್ ಐದು ಸಾವಿರ ಮತಗಳನ್ನು ಪಡೆಯಿತು. ಸಮಾಜವಾದಿ ಪಕ್ಷದ ಅಭ್ಯರ್ಥಿಯು ಎರಡನೇ ಸ್ಥಾನಕ್ಕೆತೃಪ್ತಿಪಡಬೇಕಾಯಿತು.

ಬಿಜೆಪಿ ಹಾದಿ ಸುಗಮ
ಮಾಯಾವತಿ ಅವರ ಬಹುಜನ ಸಮಾಜ ಪಕ್ಷವು ರಾಜ್ಯದ 91 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಬಹುತೇಕ ಅಭ್ಯರ್ಥಿಗಳು ಮುಸ್ಲಿಂ ಮತಗಳನ್ನು ವಿಭಜಿಸಿದ್ದರಿಂದ ಬಿಜೆಪಿ ಗೆಲುವಿನ ದಾರಿ ಸುಗಮವಾಯಿತು.

122 ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಪ್ರತಿನಿಧಿಸುವ ಸಮುದಾಯದ ಅಭ್ಯರ್ಥಿಗಳನ್ನೇ ಬಿಎಸ್‌ಪಿ ಸಹ ಕಣಕ್ಕಿಳಿಸಿದ್ದರಿಂದ ಬಿಜೆಪಿಯು 68 ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.