ಜೈಪುರ: ವಿದ್ಯುತ್ ತಂತಿ ತಗುಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಮನೋಹರಪುರದಲ್ಲಿ ಮಂಗಳವಾರ ನಡೆದಿದೆ.
ಬೆಂಕಿ ಅವಘಡಕ್ಕೀಡಾದ ಡಬ್ಬಲ್ ಡೆಕ್ಕರ್ ಸ್ಲೀಪರ್ ಬಸ್ ಉತ್ತರ ಪ್ರದೇಶದ ಫಿಲಿಬಿತ್‌ನಿಂದ ತೆರಳುತ್ತಿತ್ತು. ಅದರಲ್ಲಿ ಇಟ್ಟಿಗೆ ಫ್ಯಾಕ್ಟರಿಯ ಸುಮಾರು 50 ಕಾರ್ಮಿಕರಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ಬಸ್‌ನ ಮೇಲ್ಭಾಗದಲ್ಲಿ ಮೋಟಾರ್ ಸೈಕಲ್, ಸೈಕಲ್ ಸೇರಿದಂತೆ ಮನೆಯ ಹಲವು ವಸ್ತುಗಳನ್ನು ಇರಿಸಲಾಗಿತ್ತು. ಬಸ್ ಮೋಹನಪುರ ಸಮೀಪಿಸಿದಾಗ ವಿದ್ಯುತ್ ತಂತಿ ಬಸ್‌ಗೆ ತಾಗಿದೆ. ಮೇಲಿದ್ದ ವಸ್ತುಗಳಿಗೆ ತಂತಿ ತಾಗಿದರಿಂದ ತಕ್ಷಣ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿದೆ ಎಂದೂ ಸಿಂಗ್ ಹೇಳಿದ್ದಾರೆ.
ಬಸ್‌ನಲ್ಲಿ ಕೆಲವು ಗ್ಯಾಸ್ ಸಿಲಿಂಡರ್‌ಗಳನ್ನೂ ಇರಿಸಲಾಗಿತ್ತು. ಆ ಪೈಕಿ ಎರಡು ಸಿಲಿಂಡರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಹಲವು ಪ್ರಯಾಣಿಕರು ಬಸ್‌ನಿಂದ ಹೊರಗೆ ಜಿಗಿದು ಪಾರಾಗಿದ್ದಾರೆ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಹೇಳಿದ್ದಾರೆ.
ಘಟನೆಯ ಸಂಬಂಧ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಪ್ರೇಮ್ ಚಂದ್ ಬೈರ್ವಾ ಹೇಳಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಎಸಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರು ಸಜೀವ ದಹನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.